ADVERTISEMENT

ಏಡ್ಸ್‌ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಮುಖ್ಯ

ಏಡ್ಸ್‌ ದಿನ, ಜಾಥಾ–ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ವಿವೇಕಾನಂದ ಎಸ್‌ ಪಂಡಿತ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:30 IST
Last Updated 3 ಡಿಸೆಂಬರ್ 2019, 20:30 IST
ವಿಶ್ವ ಏಡ್ಸ್‌ ದಿನಾಚರಣೆಯ ಪ್ರಯುಕ್ತ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್‌ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ವಿವೇಕಾನಂದ ಎಸ್‌ ಪಂಡಿತ್‌ ಉದ್ಘಾಟಿಸಿದರು.
ವಿಶ್ವ ಏಡ್ಸ್‌ ದಿನಾಚರಣೆಯ ಪ್ರಯುಕ್ತ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್‌ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ವಿವೇಕಾನಂದ ಎಸ್‌ ಪಂಡಿತ್‌ ಉದ್ಘಾಟಿಸಿದರು.   

ಉಡುಪಿ: ಎಚ್‌ಐವಿ ಮತ್ತು ಏಡ್ಸ್‌ ರೋಗವನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ. ಇದು ಹೇಗೆ ಬರುತ್ತದೆ ಎನ್ನುವುದಕ್ಕಿಂತಲೂ ಅದನ್ನು ಯಾವ ರೀತಿ ತಡೆಗಟ್ಟಬಹುದು ಎನ್ನುವುದರ ಬಗ್ಗೆ ನಾವು ಯೋಚಿಸಿ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ವಿವೇಕಾನಂದ ಎಸ್‌ ಪಂಡಿತ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್‌ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೊದಲಾದ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಏಡ್ಸ್‌ ದಿನಾಚರಣೆಯ ಪ್ರಯುಕ್ತ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್‌ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ವೈದ್ಯಕೀಯ ಕ್ಷೇತ್ರವೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದರೂ ಸಹ ಏಡ್ಸ್‌ಗೆ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ನಾವೆಲ್ಲರೂ ಜಾತಿ, -ಮತ ಭೇದ ತೊರೆದು ಏಡ್ಸ್‌ ಎಂಬ ಮಾರಕ ರೋಗದ ವಿರುದ್ಧ ಪ್ರತಿರೋಧ ಒಡ್ಡಬೇಕು. ಏಡ್ಸ್‌ ಬಗ್ಗೆ ನಮ್ಮ ದೇಶದಲ್ಲಿ ಇರುವ ಅರಿವಿನ ಕೊರತೆಯನ್ನು ಹೋಗಲಾಡಿಸಬೇಕು ಎಂದರು.

ADVERTISEMENT

ಜಿಲ್ಲಾ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕಾವೇರಿ ಲೇಲೆ ಮಾತನಾಡಿ, ಏಡ್ಸ್‌ ಬಗ್ಗೆ ಸತ್ಯಕ್ಕಿಂತಲೂ ಮಿಥ್ಯಾ ವಿಷಯಗಳು ಹರಿದಾಡುವುದೆ ಜಾಸ್ತಿ. ಏಡ್ಸ್‌ ತಡೆಗಟ್ಟಲು ಇರುವ ಏಕೈಕ ಸಾಧನವೆ ಅರಿವು. ಆದರೆ ಈ ರೋಗದ ಹರಡುವಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ ಎಂದು ಹೇಳಿದರು.

ಜಿಪಂ ಸಿಇಒ ಪ್ರೀತಿ ಗೆಹ್ಲೋಟ್‌, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಉಡುಪಿ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಲಯನ್ಸ್‌ ಕ್ಲಬ್‌ ಉಡುಪಿಯ ಪ್ರಥಮ ಉಪಾಧ್ಯಕ್ಷ ರಾಜೀವ್‌ ನಾಯಕ್‌, ಪ್ರಜ್ಞಾ ಕೌನ್ಸಲಿಂಗ್‌ ಸೆಂಟರಿನ ದೇವದಾಸ್‌ ಉಚ್ಚಿಲ, ವಿದ್ಯಾರತ್ನ ಸ್ಕೂಲ್‌ ಮತ್ತು ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲೆ ಡಾ. ಅನಿತಾ ಸಿ. ರಾವ್‌, ಆರ್‌ಸಿಎಚ್‌ ಅಧಿಕಾರಿ ಡಾ. ರಾಮರಾವ್‌ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಉಪನ್ಯಾಸ ನೀಡಿದರು. ಮೇಲ್ವಿಚಾರಕ ಮಹಾಬಲೇಶ್‌ ಸ್ವಾಗತಿಸಿದರು. ಮಂಜುನಾತ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.