ADVERTISEMENT

’ಕಾನೂನಿನ ಅಜ್ಞಾನಕ್ಕೆ ಕ್ಷಮೆ ಇಲ್ಲ‘

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕಾನೂನು ಸೇವೆಗಳ ಚಟುವಟಿಕೆಗಳ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:05 IST
Last Updated 3 ಸೆಪ್ಟೆಂಬರ್ 2022, 16:05 IST
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸೇವಾ ಚಟುವಟಿಕೆಗಳ ಕುರಿತ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಮಾತನಾಡಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸೇವಾ ಚಟುವಟಿಕೆಗಳ ಕುರಿತ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಮಾತನಾಡಿದರು.   

ಉಡುಪಿ: ಕಾನೂನಿನ ಅಜ್ಞಾನಕ್ಕೆ ಯಾವ ಕ್ಷಮೆಯೂ ಇಲ್ಲ, ಕಾನೂನಿನಿಂದ ತಪ್ಪಿಸಿಕೊಳ್ಳಲು ಅಜ್ಞಾನ ಕಾರಣವೂ ಆಗುವುದಿಲ್ಲ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸೇವಾ ಚಟುವಟಿಕೆಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು ಕಾನೂನು ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡು ಕಾನೂನಿನ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾನೂನು ವಿದ್ಯಾರ್ಥಿಗಳು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರವು ಬಡವರ ಹಾಗೂ ನೊಂದವರಿಗೆ ನ್ಯಾಯ ಒದಗಿಸಲು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ADVERTISEMENT

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮದ ಕುರಿತು ವಿವರ ನೀಡಿದರು.

ಕಾನೂನು ಸೇವೆಗಳ ಪ್ರಾಧಿಕಾರಗಳು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸ್ಥಾಪನೆಯಾಗಿದ್ದು, ಬಡವರಿಗೆ ಹಾಗೂ ನೊಂದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವುದು ಇದರ ಮೂಲ ಉದ್ದೇಶ. ಜನರಲ್ಲಿ ಕಾನೂನುಗಳ ಹಾಗೂ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ, ಲೋಕ್ ಅದಾಲತ್‍ಗಳನ್ನು ನಡೆಸುವ ಮೂಲಕ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ವಿಗ್ನೇಶ್ ಕುಮಾರ್‌ ‘ಕಾನೂನು ಕಾಲೇಜಿನಲ್ಲಿ ಕಾನೂನು ಸೇವೆಗಳ ಕ್ಲಿನಿಕ್’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ನಿರ್ಮಲ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಕೆ.ಎಸ್‌.ರಘುನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಶ್ರೀನಿವಾಸ್‍ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.

ವಿದ್ಯಾರ್ಥಿಗಳಾದ ಸ್ವಪ್ನ ಪ್ರಾರ್ಥನೆ ಸಲ್ಲಿಸಿದರು. ಸಂಪತ್ ಕುಮಾರ್ ಹಾಗೂ ಶೈಮಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ತಿಕ್ ವಂದಿಸಿದರು. ಅಮೃತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕಾನೂನು ನೆರವು ಕ್ಲಬ್‍ನ ಕಾರ್ಯದರ್ಶಿ ರಕ್ಷಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.