ADVERTISEMENT

ಟ್ರಾಯ್‌ ದರ ನೀತಿ ಕೇಬಲ್‌ ಆಪರೇಟರ್ಸ್‌ಗಳಿಗೆ ಮಾರಕ ಎಂದು ಆರೋಪಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ನೀತಿ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:24 IST
Last Updated 18 ಡಿಸೆಂಬರ್ 2018, 12:24 IST
ಟ್ರಾಯ್‌ ಹೊಸ ದರ ನೀತಿ ಖಂಡಿಸಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೇಬಲ್‌ ಆಪರೇಟರ್ಸ್‌ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.
ಟ್ರಾಯ್‌ ಹೊಸ ದರ ನೀತಿ ಖಂಡಿಸಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೇಬಲ್‌ ಆಪರೇಟರ್ಸ್‌ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.   

ಉಡುಪಿ: ಕೇಂದ್ರ ಸರ್ಕಾರ ಕೇಬಲ್‌ ಗ್ರಾಹಕರಿಗೆ ರೂಪಿಸಿರುವ ನೂತನ ನೀತಿಯಿಂದಾಗಿ ಕೇಬಲ್‌ ಆಪರೇಟರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾ ಕೇಬಲ್‌ ಆಪರೇಟರ್‌ ಸಂಘದ ಕಾರ್ಯದರ್ಶಿ ಕಮಲಾಕ್ಷ ಪೈ ಆಕ್ರೋಶ ವ್ಯಕ್ತಪಡಿಸಿದರು.

ಟ್ರಾಯ್‌ ಹೊಸ ದರನೀತಿ ಖಂಡಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಿಲ್ಲಾ ಕೇಬಲ್‌ ಆಪರೇಟರ್‌ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಮೂಲಕ ಕೇಬಲ್ ಆಪರೇಟರ್ ಹಾಗೂ ಗ್ರಾಹಕರನ್ನು ನಷ್ಟಕ್ಕೆ ಸಿಲುಕಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಪ್ರತಿಯೊಂದು ಚಾನೆಲ್‌ಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದು, ಇದು ಗ್ರಾಹಕರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ADVERTISEMENT

ಪ್ರಸ್ತುತ 250ಕ್ಕೂ ಅಧಿಕ ಚಾನೆಲ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಆರಂಭಿಕ ಶುಲ್ಕ ₹ 130 ಹಾಗೂ ₹ 24 ತೆರಿಗೆ ಜತೆಗೆ ಇತರ ಚಾನೆಲ್‌ಗಳ ಸೇವೆಯನ್ನು ನೀಡಲು ₹ 250 ಪ್ರತಿ ತಿಂಗಳು ಸಂಗ್ರಹಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈಚೆಗೆ ಹೊರಡಿಸಿರುವ ಆದೇಶದಿಂದ ಗ್ರಾಹಕರು ಹೆಚ್ಚುವರಿ ಪಾವತಿಸಬೇಕಾಗುತ್ತದೆ ಎಂದರು.

ಡಿ.29ರಿಂದ ಕೇಬಲ್ ಸಂಪರ್ಕಕ್ಕಾಗಿ ತೆರಿಗೆ ಸೇರಿದಂತೆ ಕನಿಷ್ಠ ₹ 154 ಶುಲ್ಕವನ್ನು ಗ್ರಾಹಕರು ಪಾವತಿಸಬೇಕಿದ್ದು, ಹಾಗೂ ಪ್ರತಿಯೊಂದು ಪೇ ಚಾನಲ್‌ಗಳಗೆ ₹15ರಿಂದ ₹ 30 ಹೆಚ್ಚುವರಿ ತೆರಬೇಕಾಗುತ್ತದೆ. ಇದರಿಂದಾಗಿ ಮಾಸಿಕ 1,000 ಶುಲ್ಕ ನೀಡಬೇಕಾಗುವುದು ಅನಿವಾರ್ಯವಾಗಲಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ ಎಂದು ಆರೋಪಿಸಿದರು.

ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಇಂತಹದೊಂದು ನಿರ್ಧಾರ ಕೈಗೊಂಡಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಬಲ್ ಆಪರೇಟರ್‌ಗಳ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಪ್ರಸ್ತುತ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು

ಅಧ್ಯಕ್ಷ ಟಿ.ಕೆ.ಕೋಟ್ಯಾನ್‌ ಮಾತನಾಡಿ, ಹೊಸ ನೀತಿಯಲ್ಲಿ ಟ್ರಾಯ್‌ ಹಾಗೂ ಎಂ.ಎಸ್‌.ಒ ಹೊರತುಪಡಿಸಿ ಲೋಕಲ್‌ ಕೇಬಲ್‌ ಆಪರೇಟರ್ಸ್‌ಗಳನ್ನು ಒಪ್ಪಂದದಲ್ಲಿ ಪರಿಗಣಿಸಿಲ್ಲ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಅನೇಕ ವರ್ಷಗಳಿಂದ ಮನೆ–ಮನೆಗೆ ಕೇಬಲ್‌ ಸೇವೆ ಕೊಡುತ್ತಿರುವ ಕೇಬಲ್‌ ಆಪರೇಟರ್‌ಗಳಿಗೆ ಬೀದಿಗೆ ಬೀಳಲಿದ್ದಾರೆ. ಗ್ರಾಹಕರ ಕೊರತೆ ಎದುರಿಸುತ್ತಿರುವ ಕೇಬಲ್ ಆಪರೇಟರ್‌ಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಈ ಹೊಸ ಕಾನೂನು ಜಾರಿಗೊಂಡರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕೇಬಲ್‌ ಆಪರೇಟರ್‌ ಸಂಘ ಸದಸ್ಯರು ಟ್ರಾಯ್‌ನ ನೂತನ ನೀತಿಯಿಂದ ಕೇಬಲ್‌ ಆಪರೇಟ್‌ಗಳಿಗೆ ಹಾಗೂ ಗ್ರಾಹಕರಿಗೆ ಆಗುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಕೇಬಲ್‌ ಆಪರೇಟರ್ಸ್‌ ಆಸೋಸೆಯೇಶನ್‌ ರಾಜು ಪೂಜಾರಿ, ರಾಮಚಂದ್ರ. ಸುರೇಶ್‌ ಶೆಟ್ಟಿ, ಚಂದ್ರಶೇಖರ್‌, ನಾಗರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.