ADVERTISEMENT

ಉಡುಪಿ | ಶಾಲಾರಂಭ ಸನಿಹ: ಇನ್ನು ಕಲಿಕೆಯತ್ತ ಮಕ್ಕಳ ಚಿತ್ತ

ಬ್ಯಾಗ್‌, ಸ್ಟೇಷನರಿ ಸಾಮಗ್ರಿ ಖರೀದಿ ಭರಾಟೆ: ನಡೆದಿದೆ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿ ಕಾರ್ಯ

ನವೀನ ಕುಮಾರ್ ಜಿ.
Published 19 ಮೇ 2025, 6:20 IST
Last Updated 19 ಮೇ 2025, 6:20 IST
ಉಡುಪಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಸ್ಟೇಷನರಿ ಸಾಮಗ್ರಿ ಖರೀದಿಸಿದ ಜನ
ಉಡುಪಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಸ್ಟೇಷನರಿ ಸಾಮಗ್ರಿ ಖರೀದಿಸಿದ ಜನ   

ಉಡುಪಿ: ಬೇಸಿಗೆಯ ರಜೆ ಮುಗಿದು ಇನ್ನು ಕೆಲವೇ ದಿನಗಳಲ್ಲಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲಿದ್ದು, ಎಲ್ಲೆಡೆ ಪುಸ್ತಕ, ಬ್ಯಾಗ್, ಸ್ಟೇಷನರಿ ಸಾಮಗ್ರಿಗಳ ಖರೀದಿ ಭರಾಟೆಯೂ ಜೋರಾಗಿದೆ.

ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡುವ ಕಾರ್ಯವೂ ನಡೆದಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಮತ್ತು ಅನುದಾನರಹಿತ ಶಾಲೆಗಳಿಗೆ ನಿಗದಿತ ದರದಲ್ಲಿ ಸರ್ಕಾರ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತದೆ.

ADVERTISEMENT

ಜಿಲ್ಲೆಯಲ್ಲಿ ಇದುವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಶೇ 56.05ರಷ್ಟು, ಅನುದಾನ ರಹಿತ ಶಾಲೆಗಳಿಗೆ ಶೇ 75.42ರಷ್ಟು ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಆದರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಸರಬರಾಜು ಇನ್ನೂ ಆರಂಭವಾಗಿಲ್ಲ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ಸಮವಸ್ತ್ರಗಳು ಇನ್ನೂ ಬಾರದಿರುವುದರಿಂದ ಅವುಗಳ ವಿತರಣೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಪೋಷಕರು ಹೇಳಿದರೆ, ಶಾಲೆ ಅರಂಭವಾಗುವ ಮೊದಲು ಸಮವಸ್ತ್ರಗಳೂ ಲಭಿಸಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಶಾಲೆಗಳಲ್ಲಿ ಸಿದ್ಧ ಸಮವಸ್ತ್ರಗಳನ್ನು ನೀಡಿದರೆ, ಇನ್ನು ಕೆಲವು ಶಾಲೆಗಳಲ್ಲಿ ನೀಡುವ ಸಮವಸ್ತ್ರದ ಬಟ್ಟೆಗಳನ್ನು ಟೈಲರ್‌ಗಳ ಬಳಿ ಹೊಲಿಸಬೇಕಾಗುತ್ತದೆ. ಈ ಕಾರಣಕ್ಕೆ ಟೈಲರ್‌ಗಳಿಗೂ ಬಿಡುವಿಲ್ಲದ ಕೆಲಸ ಆರಂಭವಾಗಿದೆ. ಶಾಪಿಂಗ್ ಮಾಲ್‌, ಅಂಗಡಿಗಳಲ್ಲಿ ಶಾಲಾ ಬ್ಯಾಗ್‌, ಕೊಡೆ, ಸ್ಟೇಷನರಿ ಸಾಮಗ್ರಿಗಳ ಖರೀದಿ ಭರಾಟೆಯೂ ಜೋರಾಗಿದೆ.

ಕರಾವಳಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಗಾಳಿ, ಮಳೆ ಜೋರಾಗಿರುವುದರಿಂದ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಿ, ಶೀಘ್ರ ಪೂರ್ಣಗೊಳಿಸಬೇಕು ಎಂದು ‍ಪೋಷಕರು ಒತ್ತಾಯಿಸಿದ್ದಾರೆ.

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಹಲವು ಮಾನದಂಡಗಳಿದ್ದರೂ ಕೆಲವು ವಾಹನಗಳ ಚಾಲಕರು ಅವುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿರುತ್ತದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟವರು ಕಟ್ಟುನಿಟ್ಟಿನ ಕ್ರಮ ಈಗಲೇ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಶಾಲಾ ವಾಹನಗಳಲ್ಲದೆ ಆಟೊ, ವ್ಯಾನ್, ಟೆಂಪೊ ಟ್ರಾವೆಲರ್‌, ಮಿನಿ ಬಸ್‌ಗಳಲ್ಲೂ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದೆ. ಇಂತಹ ಕೆಲವು ವಾಹನಗಳು ಅತಿ ವೇಗದಿಂದ ಸಂಚರಿಸುತ್ತವೆ. ಆದ್ದರಿಂದ ಶಾಲಾ ವಾಹನಗಳ ಚಾಲಕರಿಗೆ ಆರಂಭದಲ್ಲೇ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದೂ ಹೇಳಿದ್ದಾರೆ.

‘ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ’

ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ. ಅಂತಹ ಶಾಲೆಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗುವುದು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಗಬೇಕಾದ ಕೆಲಸಗಳನ್ನು ಶಾಲೆ ಶುರುವಾಗುವುದರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ. ತಿಳಿಸಿದರು. ಶಾಲಾ ಕಟ್ಟದ ಬಳಿ ಅಪಾಯಕಾರಿಯಾಗಿರುವ ಮರಗಳ ಕೊಂಬೆಗಳನ್ನು ಕತ್ತರಿಸುವ ಕೆಲಸ ನಡೆದಿದೆ. ಜೊತೆಗೆ ಶಾಲೆಗಳ ಪರಿಸರವನ್ನು ಸ್ವಚ್ಛಗೊಳಿಸಲಾಗುತ್ತದೆ. ಶಾಲೆಗಳ ಆವರಣದಲ್ಲಿ ಕಾಮಗಾರಿಗಳಿಗಾಗಿ ತೆಗೆದಿರುವ ಹೊಂಡಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಶೇ 55ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿವೆ. ಶಾಲೆ ಆರಂಭವಾಗುವ ಮೊದಲು ಶೇ 100ರಷ್ಟು ಪಠ್ಯಪುಸ್ತಕಗಳ ಸರಬರಾಜು ಪೂರ್ಣಗೊಳ್ಳಲಿದೆ ಎಂದರು.

‘ಹೆತ್ತವರಿಗೂ ಮಾಹಿತಿ ನೀಡಬೇಕು’

ಸರ್ಕಾರಿ ಶಾಲೆಗಳು ಅಂದರೆ ನಿಜವಾದ ಅರ್ಥದಲ್ಲಿ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ದೇಗುಲಗಳಿದ್ದ ಹಾಗೆ. ಬಹುಮುಖ್ಯವಾಗಿ ಶಾಲಾ ಆರಂಭದ ದಿನವೇ ಮಕ್ಕಳ ಜೊತೆ ಹೆತ್ತವರನ್ನೂ ಬರ ಮಾಡಿಕೊಂಡು ಶಾಲೆಯ ಪರಿಸರ ಪರಿಕರಗಳ ಬಗ್ಗೆ ಅವರಿಗೂ ಮಾಹಿತಿ ನೀಡುವುದು ಅತಿ ಮುಖ್ಯ ಜವಾಬ್ದಾರಿಯೂ ಹೌದು ಎಂದು ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಶಾಲೆ ಪ್ರಾರಂಭ ದಿನ ಸಂಭ್ರಮದ ಹಬ್ಬ. ಮೊದಲ ದಿನವೇ ಮಕ್ಕಳು ನಗುನಗುತ್ತಾ ಆಡಿಕೊಂಡು ಶಾಲೆಗೆ ಬರುವುದನ್ನು ನೇೂಡುವುದೇ ಚೆಂದ. ಇಂತಹ ಹಬ್ಬದ ಸಂಭ್ರಮ ಶಾಲೆಯಲ್ಲಿ ರೂಪಿಸುವುದು ಶಿಕ್ಷಕರ ಹೊಣೆಗಾರಿಕೆ. ಬಹುಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಪೂರ್ವತಯಾರಿ. ಶಾಲಾ ಮಕ್ಕಳ ಆರೇೂಗ್ಯಕ್ಕೆ ಹಿತಕರವಾದ ಊಟವನ್ನು ಸಮಪಕವಾಗಿ ನೀಡುವುದು ಅವರ ಜವಾಬ್ದಾರಿ. ಅದಕ್ಕೂ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಶಾಲೆಯ ಕಟ್ಟಡ ಮಳೆಗಾಲದಲ್ಲಿ ಸೋರದ ಹಾಗೆ ವ್ಯವಸ್ಥೆ ಮಾಡಿಕೊಂಡಿರಬೇಕು. ಶಾಲೆಯ ಹೊರಗೂ– ಒಳಗೂ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದೂ ಅವರು ಹೇಳುತ್ತಾರೆ. ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ವಾಹನದ ಸೌಕರ್ಯ ಇಲ್ಲದೇ ಇರಬಹುದು. ಹಾಗಾಗಿ ಮಳೆಗಾಲದಲ್ಲಿ ಅವರು ಶಾಲೆಗೆ ಬಂದು ಹೇೂಗುವ ಸುರಕ್ಷತೆ ಬಗ್ಗೆಯೂ ಶಾಲಾ ವತಿಯಿಂದ ಜಾಗೃತಿ ವಹಿಸಬೇಕು. ಇದು ಉಡುಪಿ ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಬೇಕು. ವಿದ್ಯಾರ್ಥಿಗಳಿಗೆ ನೀಡುವ ಸಮವಸ್ತ್ರ ಪಠ್ಯಪುಸ್ತಕ ಮುಂತಾದ ಶೈಕ್ಷಣಿಕ ಪರಿಕರಗಳ ವಿತರಣೆ ಶಾಲೆ ಪ್ರಾರಂಭವಾದ ದಿನದಿಂದಲೇ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.