ADVERTISEMENT

ಅಸ್ಪೃಶ್ಯತೆ: ವ್ಯವಸ್ಥೆಯ ದುರಂತ

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:05 IST
Last Updated 2 ಅಕ್ಟೋಬರ್ 2022, 5:05 IST
ಕುಂದಾಪುರದಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದರು.
ಕುಂದಾಪುರದಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದರು.   

ಕುಂದಾಪುರ: ‘ರಾಜ್ಯದ ಕೋಲಾರ, ಕೊಪ್ಪಳದಲ್ಲಿ ನಡೆದ ಅಸ್ಪೃಶ್ಯತೆ ಘಟನೆ ಅತ್ಯಂತ ಕ್ರೌರ್ಯವಾದುದು. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಹೇಯ ಕೃತ್ಯ ನಡೆಸಿದವರಿಗೆ ಕಾನೂನಿಯಡಿಯಲ್ಲಿ ಕಠಿಣ ಶಿಕ್ಷೆ ಕೊಡಬೇಕು. ಅಸ್ಪೃಶ್ಯತೆ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಅಸ್ಪೃಶ್ಯತೆ ವಿಚಾರದಲ್ಲಿ ಡಾ.ಅಂಬೇಡ್ಕರ್ ಅವರ ಕನಸು ನನಸಾಗದಿರುವುದು ನಮ್ಮ ವ್ಯವಸ್ಥೆಯ ದುರಂತ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹತ್ಯೆಯಾದ ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿರುವುದು ಸ್ವಾಗತಾರ್ಹ. ಆದರೆ ಗುತ್ತಿಗೆ ಕೆಲಸಕ್ಕೆ ಜೀವನ ಭದ್ರತೆ ಇಲ್ಲದೆ ಇರುವುದರಿಂದ, ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾಯಂ ಕೆಲಸ ಕೊಡುಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿ ಮತಾಂಧ ಶಕ್ತಿಗಳಿಗೆ ಬಲಿಯಾಗಿರುವ ಅನೇಕ ಕುಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿ ಇವೆ. ಈ ಕುಟುಂಗಳಿಗೂ ಆಧಾರವಾಗುವ ಹಾಗೂ ಆಸರೆ ನೀಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ರಾಜಕೀಯ ಲಾಭ ಪಡೆದುಕೊಂಡ ಪರೇಶ್ಷ ಮೇಸ್ತಾ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಿಂತ ನೀರಿನಂತಾಗಿದೆ. ಈ ಪ್ರಕರಣಗಳ ಶೀಘ್ರ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇಚ್ಛಾ ಶಕ್ತಿ ತೋರಬೇಕಿದೆ’ ಎಂದರು.

‘ಶ್ರೀರಾಮ ಸೇನೆಯು ರಾಜಕೀಯ ಪಕ್ಷವಲ್ಲ, ಮುಂಬರುವ ಯಾವುದೇ ಚುನಾವಣೆಯಲ್ಲಿ, ನನ್ನನ್ನು ಸೇರಿದಂತೆ ಶ್ರೀರಾಮ ಸೇನೆಯ ಯಾರೂ ಸ್ಪರ್ಧಿಸುವುದಿಲ್ಲ’ ಎಂದರು.

ADVERTISEMENT

‘ಕುಂದಾಪುರ ಪುರಸಭೆಯ ಎದುರಿನ ಸಾರ್ವಜನಿಕ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿಪಡಿಸಲು ಇಲ್ಲಿನ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು. ಸರ್ಕಾರ, ಸಚಿವರು ಹಾಗೂ ಶಾಸಕರು ಈ ಕುರಿತು ಗಮನ ನೀಡಬೇಕು. ಕುಂದಾಪುರದ ಸರ್ಕಾರಿ ಕಾಲೇಜಿನ ಆವರಣದ ಒಳಗಿರುವ ದರ್ಗಾ ಗೋಡೆಯ ಬಗ್ಗೆಯೂ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ, ದಾಖಲೆ ದೊರೆಕಿದ ಬಳಿಕ ಮುಂದಿನ ಹೋರಾಟ ಸಂಘಟಿಸಲಾಗುವುದು’ ಎಂದರು.

ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಮುಖಂಡ ಮೋಹನ್ ಭಟ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಂ ಅಂಬೇಕಲ್ಲು, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ ಕುಂದಾಪುರ, ವಕ್ತಾರ ಶರತ್ ಮಣಿಪಾಲ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.