ADVERTISEMENT

ಎಲ್ಲೆಡೆ ಕನ್ನಡ ಬಳಕೆ ಕಡ್ಡಾಯವಾಗಿರಲಿ

ಸರ್ಕಾರಿ ಇಲಾಖೆಗಳ ಪತ್ರ ವ್ಯವಹಾರವೂ ಕನ್ನಡದಲ್ಲಿರಲಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 16:30 IST
Last Updated 26 ಮಾರ್ಚ್ 2021, 16:30 IST
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿದರು.   

ಉಡುಪಿ: ಎಲ್ಲ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಉದ್ದಿಮೆಗಳು, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಶುಕ್ರವಾರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಕನ್ನಡ ಕಾಯಕ ವರ್ಷವನ್ನು ಆಚರಿಸಲಾಗುತ್ತಿದ್ದು, ಸರ್ಕಾರದಿಂದ ನೀಡಿರುವ ಅಧಿಕೃತ ಚಿಹ್ನೆಯನ್ನು ಎಲ್ಲ ಸರ್ಕಾರಿ ಇಲಾಖೆಗಳು ದೈನಂದಿನ ಪತ್ರ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂದು ಸೂಚನೆ ನೀಡಿದರು.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು, ಗಣಕಯಂತ್ರದಲ್ಲಿ ಕನ್ನಡ ತಂತ್ರಾಂಶ ಅಳವಡಿಸಬೇಕು, ಸರ್ಕಾರಿ ವಾಹನಗಳ ನಾಮಫಲಕಗಳಲ್ಲಿ ಕನ್ನಡ ಸಂಖ್ಯೆ ಹಾಗೂ ಪದಗಳ ಬಳಕೆ, ಮೈಲುಗಳಲ್ಲಿ, ಹೆದ್ದಾರಿ ಫಲಕಗಳಲ್ಲಿ ಕನ್ನಡ ಪ್ರಧಾನವಾಗಿ ಬಳಕೆಯಾಗಲಿ. ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಳಲ್ಲಿ ಕನ್ನಡವನ್ನು ಒಂದು ಅಂಶವಾಗಿ ಚರ್ಚೆ ಮಾಡಬೇಕು ಎಂದರು.

ADVERTISEMENT

ಎಲ್ಲ ಅಂಗಡಿಗಳು ಕಂಪೆನಿ-ಕಚೇರಿ, ಹೋಟೆಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಜಾಗ ಕಡ್ಡಾಯವಾಗಿ ಕನ್ನಡಕ್ಕೆ ಮೀಸಲಾಗಿರಬೇಕು. ಸರ್ಕಾರಿ ಇಲಾಖೆಗಳು ಆಂಗ್ಲಭಾಷೆಯಲ್ಲಿ ವಾರ್ಷಿಕ ದರಪಟ್ಟಿ, ಅಂದಾಜು ಪಟ್ಟಿ, ಟೆಂಡರ್‌ಗಳನ್ನು ಪತ್ರಿಕೆಗಳಿಗೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆಗಳ ದುರಸ್ತಿ, ಗ್ರಂಥಾಲಯ, ಗುಣಮಟ್ಟದ ಶಿಕ್ಷಣ, ಮೂಲಸೌಲಭ್ಯ ಅಭಿವೃದ್ಧಿಯಾಗಬೇಕು, ಎಲ್ಲ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕ ಕುಮಾರ ಬೇಕ್ಕೆರಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ದೃಷ್ಟಿಯಿಂದ ಆಡಳಿತದ ಎಲ್ಲ ವಲಯಗಳಲ್ಲಿ ಕನ್ನಡಪರ ಆದೇಶಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಕನ್ನಡ ಪರ ಆದೇಶ ಮತ್ತು ಸುತ್ತೋಲೆಗಳ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ವಾರ್ತಾಧಿಕಾರಿ ಬಿ.ಮಂಜುನಾಥ್, ಕನ್ನಡ ಜಾಗೃತಿ ಸಮಿತಿಯ ಸದಸ್ಯ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ , ರಂಗಭೂಮಿ ಸಂಸ್ಥೆಯ ಪ್ರದೀಪ್‌ಚಂದ್ರ ಕುತ್ಪಾಡಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ದೀಪಿಕಾ ಭಟ್, ಶಿಲ್ಪಾ ಜೋಶಿ ಆತ್ರಾಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.