ಉಡುಪಿ: ಮೇರಿ ಮಾತೆಯ ಸರಳತೆಯ ಗುಣ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು ಅವರು ನಡೆದ ಹಾದಿಯಲ್ಲಿ ಮುನ್ನಡೆಯೋಣ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಕಲ್ಮಾಡಿ ಸೇತುವೆಯ ಬಳಿ ಸ್ಟೆಲ್ಲಾ ಮಾರಿಸ್ ಚರ್ಚಿನ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕಲ್ಮಾಡಿ ಸೇತುವೆಯ ಬಳಿಯಲ್ಲಿ ವೆಲಂಕಣಿ ಮಾತೆಯ ಮೂರ್ತಿಯ ಆಶೀರ್ವಚನ ನಡೆಯಿತು. ಇದೇ ವೇಳೆ ಭಾರತೀಯ ಕಥೊಲಿಕ ಯುವ ಸಂಚಾಲನ ಕರ್ನಾಟಕ ಪ್ರಾಂತ ಇದರ ವಾರ್ಷಿಕ ಸಮಾವೇಶದ ಪೂರ್ವಭಾವಿಯಾಗಿ ರಾಜ್ಯದಾದ್ಯಂತ ಸಂಚಾರದಲ್ಲಿರುವ ಪವಿತ್ರ ಶಿಲುಬೆಯ ಮೆರವಣಿಗೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಐಸಿವೈಎಂ ಸದಸ್ಯರು ಕಲ್ಮಾಡಿ ಚರ್ಚ್‌ನ ಯುವ ಪದಾಧಿಕಾರಿಗಳಿಗೆ ಪವಿತ್ರ ಶಿಲುಬೆಯನ್ನು ಹಸ್ತಾಂತರಿಸಿದರು.
ಬಳಿಕ ವೆಲಂಕಣಿ ಮಾತೆಯ ಮೂರ್ತಿ ಹಾಗೂ ಪವಿತ್ರ ಶಿಲುಬೆಯೊಂದಿಗೆ ಚರ್ಚ್‌ಗೆ ಪಾದಯಾತ್ರೆಯ ಮೂಲಕ ತೆರಳಲಾಯಿತು. ಮೆರವಣಿಗೆಯ ಬಳಿಕ ಚರ್ಚ್‌ನಲ್ಲಿ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿಪೂಜೆ ನೆರವೇರಿತು.
ಪುಣ್ಯಕ್ಷೇತ್ರದ ರೆಕ್ಟರ್ ಬ್ಯಾಪ್ಟಿಸ್ಟ್ ಮಿನೇಜಸ್, ಯುವ ಆಯೋಗ ಉಡುಪಿ ಧರ್ಮಪ್ರಾಂತ್ಯದ ನಿರ್ದೇಶಕ ಸ್ಟೀವನ್ ಫೆರ್ನಾಂಡಿಸ್ ಚರ್ಚ್‌ನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.