ADVERTISEMENT

ಸಮಾಜದಿಂದ ಪಡೆದಿದ್ದನ್ನು ಮರಳಿ ಅರ್ಪಿಸಿ: ಸೋದೆ ಮಠದ ವಿದ್ಯಾವಲ್ಲಭ ತೀರ್ಥ ಶ್ರೀ

ವಿದ್ಯಾಪೋಷಕ್‌ನ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 11:38 IST
Last Updated 3 ಜನವರಿ 2021, 11:38 IST
ಯಕ್ಷಗಾನ ಕಲಾರಂಗದಿಂದ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಪೋಷಕ್‌ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ವಿತರಿಸಿದರು.
ಯಕ್ಷಗಾನ ಕಲಾರಂಗದಿಂದ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಪೋಷಕ್‌ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ವಿತರಿಸಿದರು.   

ಉಡುಪಿ: ವಿದ್ಯಾರ್ಥಿ ಜೀವನದ ಪ್ರತಿಕ್ಷಣವನ್ನೂ ವಿದ್ಯಾರ್ಥಿಗಳು ಸಾರ್ಥಕಪಡಿಸಿಕೊಂಡರೆ ಸಮಾಜದ ಬಹುದೊಡ್ಡ ಆಸ್ತಿಯಾಗಬಹುದು ಎಂದು ಸೋದೆ ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಅದಮಾರು ಮಠ, ಯಕ್ಷಗಾನ ಕಲಾರಂಗದಿಂದ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಪೋಷಕ್‌ ವಿನಮ್ರ ಸಹಾಯ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೀವನದ ಸಮಯ ರತ್ನದಂತೆ ಅಮೂಲ್ಯವಾದುದು. ಪ್ರತಿಕ್ಷಣವನ್ನು ವ್ಯರ್ಥಮಾಡಿದರೆ ಅಮೂಲ್ಯ ರತ್ನ ಕಳೆದುಕೊಂಡಂತೆ. ಸಿಕ್ಕಿರುವ ಸಮಯವನ್ನು ಬಳಸಿಕೊಂಡು ಸಾಧನೆಯ ಶಿಖರವೇರಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ADVERTISEMENT

ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯಲ್ಲಿ ತೊಡಗಿರುವ ಯಕ್ಷಗಾನ ಕಲಾರಂಗದ ಕಾರ್ಯ ಶ್ಲಾಘನೀಯ. ಕಲಾರಂಗ ಸಂಸ್ಥೆಗೆ ಕೊಟ್ಟ ಪ್ರತಿ ಪೈಸೆಯೂ ಅರ್ಹರಿಗೆ ತಲುಪಲಿದೆ ಎಂಬ ವಿಶ್ವಾಸವಿದೆ. ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮತ್ತೊಬ್ಬರಿಗೆ ನೆರವು ನೀಡಬೇಕು ಎಂದು ಕಿವಿಮಾತು ಹೇಳಿದರು.

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ಪ್ರಯತ್ನಶೀಲನಾದವನಿಗೆ ಮಾತ್ರ ಗುರಿ ತಲುಪಲು ಸಾಧ್ಯ. ಸ್ಥಿತ ಮನಸ್ಥಿತಿಯ ಮೂಲಕ ಸಾಧನೆ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಕ್ಷಗಾನ ಕಲಾರಂಗ ಅರ್ಹರನ್ನು ಗುರುತಿಸಿ ಸಹಾಯಹಸ್ತ ಚಾಚುತ್ತಿದೆ. ವಿದ್ಯಾಪೋಷಕ್‌ನಿಂದ ನೆರವು ಪಡೆದವರು ಮರಳಿ ಸಮಾಜಕ್ಕೆ ಮರಳಿಸುವ ಗುಣ ಬೆಳೆಸಿಕೊಳ್ಳಿ. ಸಮಾಜದ ಪ್ರತಿಯೊಬ್ಬರೂ ಸಮಾಜದ ಋಣ ತೀರಿಸುವ ಸಂಕಲ್ಪ ಮಾಡಬೇಕು. ತ್ಯಾಗದಿಂದ ಮಾತ್ರ ಮನಶುದ್ಧಿ ಸಾಧ್ಯ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ವಿದ್ಯಾಪೋಷಕ್‌ ವಿದ್ಯಾರ್ಥಿಗಳ ಜೀವನವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಿಕೆಗೆ ಸಮಾಜ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯ ಯವಜನಾಂಗ ಐಎಎಸ್‌, ಕೆಎಎಸ್‌ನಂತಹ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ನೇಮಿಚಂದ್ರ ಮಾತನಾಡಿ, ‘ಸಮಾಜ ಬದಲಿಸಲು ಶ್ರಮಿಸುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನನ್ನ ಬದುಕು ಹಾಗೂ ಬರಹಕ್ಕೆ ಸ್ಫೂರ್ತಿಯಾಗಿವೆ. 15 ವರ್ಷಗಳಲ್ಲಿ ₹ 5 ಕೋಟಿಗೂ ಹೆಚ್ಚು ಧನ ಸಹಾಯವನ್ನು ಬಡ ವಿದ್ಯಾರ್ಥಿಗಳಿಗೆ ನೆರವು ನೀಡಿರುವುದು ದೊಡ್ಡ ಸಾಧನೆಯೇ ಸರಿ. ವಿದ್ಯಾರ್ಜನೆಗೆ ನೀಡಿದ ನೆರವು ಎಂದಿಗೂ ವ್ಯರ್ಥವಾಗುವುದಿಲ್ಲ. ನೂರಾರು ಮಕ್ಕಳ ಭವಿಷ್ಯ ರೂಪಿಸುತ್ತವೆ ಎಂದರು.

ಎಪಿಜೆ ಅಬ್ದುಲ್ ಕಲಾಂ ಅವರ ಮಾತಿನಂತೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಿದ್ರೆಯಲ್ಲಿ ಕಾಣುವ ಕನಸುಗಳಲ್ಲ, ನಿದ್ರೆ ಬಾರದಂತೆ ಕಾಡುವ ಕನಸುಗಳನ್ನು ಕಾಣಬೇಕು ಎಂದರು.

ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ, ದಾನಿಗಳಾದ ಗೋಕುಲ್‌ನಾಥ್‌ ಪ್ರಭುಗಳು ದುಡಿಮೆಯ ಒಂದು ದೊಡ್ಡ ಭಾಗವನ್ನು ಯಕ್ಷಗಾನ ಕಲಾರಂಗಕ್ಕೆ ನೀಡುತ್ತಾ ಸಂಸ್ಥೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇವರಂತಹ ಪ್ರಚಾರಕ್ಕೆ ಆಸೆಪಡದ ಹಲವು ದಾನಿಗಳು ಸಂಸ್ಥೆಗೆ ಬೆನ್ನುಲುಬಾಗಿ ನಿಂತಿದ್ದಾರೆ. ಸೂರಿಲ್ಲದವರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ, ಬಡವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಕಲ್ಪಿಸಿದ್ದಾರೆ ಎಂದು ಶ್ಲಾಘಿಸಿದರು.

ಅಂಬಲಪಾಡಿ ದೇವಸ್ಥಾನದ ಆಡಳಿತ ಮೊಕ್ತೆಸರ ನಿ.ಬಿ.ವಿಜಯ ಬಲ್ಲಾಳ್‌, ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್‌, ಇನ್ಫೋಸಿಸ್ ಫೌಂಡೇಶನ್ ಉಪಾಧ್ಯಕ್ಷ ರವಿರಾಜ್ ಬೆಳ್ಮ, ಉದ್ಯಮಿ ಪುರುಷೋತ್ತಮ ಪಟೇಲ್, ಸೆಲ್ಕೋ ಸೋಲಾರ್‌ ಸಂಸ್ಥೆಯ ಗುರುಪ್ರಕಾಶ್ ಶೆಟ್ಟಿ, ಕಲಾರಂಗದ ಎಸ್.ವಿ.ಭಟ್, ವಿ.ಜೆ.ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.