ADVERTISEMENT

‘ನಮ್ಮ ಮತ ಮಾರಾಟಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:54 IST
Last Updated 24 ಮಾರ್ಚ್ 2019, 19:54 IST
ಸಂತೆಕಟ್ಟೆ ಮಾರುಕಟ್ಟೆಯಲ್ಲಿ ಹಾಕಿರುವ ಮತ ಜಾಗೃತಿ ಫಲಕ
ಸಂತೆಕಟ್ಟೆ ಮಾರುಕಟ್ಟೆಯಲ್ಲಿ ಹಾಕಿರುವ ಮತ ಜಾಗೃತಿ ಫಲಕ   

ಉಡುಪಿ: ‘ನಮ್ಮ ಮತ ಮಾರಾಟಕ್ಕಿಲ್ಲ, ನಮ್ಮ ಮತ ನಮ್ಮ ಹೆಮ್ಮೆ’ ಎಂಬ ಅಭಿಯಾನ ಆರಂಭವಾಗಿದೆ.

ತರಕಾರಿ ಮಾರಾಟಕ್ಕಿದೆ, ಮತ ಮಾರಾಟಕ್ಕಿಲ್ಲ, ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ, ನೋಟಿಗಲ್ಲ ವೋಟು, ರೇಟಿಗಲ್ಲ ವೋಟು, ಏಳ್ಗೆಗಾಗಿ ವೋಟು, ಪ್ರಗತಿಗಾಗಿ ಓಟು...ಹೀಗೆ, ಒಂದಷ್ಟು ಯುವ ಮನಸ್ಸುಗಳು ಒಟ್ಟಾಗಿ ಭಾನುವಾರ ಸಂತೆಕಟ್ಟೆ ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಪ್ಲೇಕಾರ್ಡ್‌ ಹಿಡಿದಿದ್ದರು.

ಭಾನುವಾರದ ಸಂತೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಸಿಡಬ್ಲ್ಯುಸಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ರಾಜ್ಯ ಸಂಚಾಲಕ ಶ್ರೀನಿವಾಸ ಗಾಣಿಗ ಅವರ ನೇತೃತ್ವದ ತಂಡ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಮತದಾನದ ಜಾಗೃತಿ ಮೂಡಿಸಿದರು.

ADVERTISEMENT

ಯುವಕ ಯುವತಿಯರ ತಂಡ ಜನರೊಟ್ಟಿಗೆ ಹಾಗೂ ವ್ಯಾಪಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಲೇ ಅವರ ಶರ್ಟ್‌ಗೆ ಮತದಾನ ಜಾಗೃತಿ ಸಂದೇಶದ ಸ್ಟಿಕ್ಕರ್ ಹಾಕಿದರು. ಜತೆಗೆ, ತಪ್ಪದೆ ಮತದಾನ ಮಾಡುವಂತೆ, ಮತವನ್ನು ಯಾರಿಗೂ ಮಾರಿಕೊಳ್ಳದಂತೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಗಾಣಿಗ,ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಮಿಲಾಗ್ರಿಸ್ ಕಾಲೇಜು, ಸ್ವೀಪ್‌ ಜಿಲ್ಲಾ ಪಂಚಾಯತ್ ಜಂಟಿಯಾಗಿ ಮತದಾರರಲ್ಲಿ ಮತಜಾಗೃತಿ ಆಂದೋಲನ ನಡೆಸಲಾಗುತ್ತಿದೆ. ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ ಸೇರಿದಂತೆ 12 ಜಿಲ್ಲೆಗಳಲ್ಲಿ ಆಂದೋಲನ ನಡೆಯುತ್ತಿದೆ ಎಂದರು.

ಈ ಸಂದರ್ಭ ಮಿಲಾಗ್ರಿಸ್‌ ಕಾಲೇಜಿನ ಸಂಯೋಜಕ ವಿಘ್ನೇಶ್‌, ಸುರೇಶ್‌, ಎಂ.ಎಂ.ಕೃಪಾ, ಜಯಂತಿ, ಅನುಶ್ರೀ, ನಮಿತ, ಅಕ್ಷತಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.