ಪಡುಬಿದ್ರಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ನಿತ್ಯ ನೀರುಣಿಸುವ ಈ ಭಾಗದ ಜನರ ಜೀವನಾಡಿಯಾಗಿರುವ ಶಾಂಭವಿ ನದಿ ನೀರನ್ನು ಎತ್ತಲು ಸರ್ಕಾರ ಕೈಗಾರಿಕೆಗೆ ಅನುಮತಿ ನೀಡಿರುವುದು ಸ್ಥಳೀಯರ ಹಾಗೂ ರೈತರ ಆಕ್ರೋಶಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
ನಂದಿಕೂರಿನ ವಿಶೇಷ ಆರ್ಥಿಕ ವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂ-11 ಕಂಪನಿಯು ಬಯೋ ಡಿಸೇಲ್ ಹಾಗೂ ಸನ್‌ಫ್ಲವರ್ ತೈಲ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದು ಘಟಕಕ್ಕೆ ಬೇಕಾದ ನೀರನ್ನು ಪಲಿಮಾರು ಶಾಂಭವಿ ನದಿಯಿಂದ ಬಳಸುವಂತೆ ಹಾಸನದಲ್ಲಿರುವ ಜಲಸಂಪನ್ಮೂಲ ಇಲಾಖೆಯ ಜಲಮಾಪನ ವಿಭಾಗ ಕಂಪನಿಗೆ ಅನುಮತಿ ನೀಡಿದೆ.
ಈ ಸಂಬಂಧ ಕಂಪನಿಯ ಜತೆ 2022ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, 43 ಷರತ್ತುಗಳೊಂದಿಗೆ ಪ್ರತಿ ದಿನ ಮೂರು ಲಕ್ಷ ಲೀಟರ್‌ನಂತೆ ವರ್ಷಕ್ಕೆ 0.00386 ಟಿಎಂಸಿ ನೀರನ್ನು ನದಿಯಿಂದ ಬಳಸಲು ಒಪ್ಪಿಗೆ ಸೂಚಿಸಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿರುವಾಗ ಜೀವನದಿ ಶಾಂಭವಿಯಿಂದ ಕೈಗಾರಿಕೆಗೆ ನೀರು ಕೊಡುವುದು ಖಂಡನೀಯ ಎಂದು ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂಭವಿ ನದಿ: ಶಾಂಭವಿ ನದಿಯು ಕಾರ್ಕಳದ ಸಾಣೂರು-ನಿಟ್ಟೆ-ಬೋಳ-ಸಚ್ಚರಿಪೇಟೆ-ಪೊಸ್ರಾಲು-ಸಂಕಲಕರಿಯ-ಮುಂಡ್ಕೂರು-ಇನ್ನಾ-ಬಳ್ಕುಂಜೆ-ಪಲಿಮಾರು-ಅವರಾಲು ಮಟ್ಟು-ಮುಲ್ಕಿ-ಹೆಜಮಾಡಿ ಮೂಲಕ ಸಮುದ್ರ ಸೇರುತ್ತದೆ. ಜಿಲ್ಲೆಯ ಕಾರ್ಕಳ, ಕಾಪು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲ್ಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ ಎನ್ನುತ್ತಾರೆ ಕೃಷಿಕರು.
ಬಳ್ಕುಂಜೆಯಲ್ಲಿ 17 ಗ್ರಾಮಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಗೂ ಶಾಂಭವಿ ನೀರು ಬಳಸಿಕೊಳ್ಳಲಾಗಿದೆ. ಬಳ್ಕುಂಜೆ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಐಕಳ ಸುತ್ತಮುತ್ತಲ ಗ್ರಾಮಗಳಿಗೆ ಶಾಂಭವಿ ನದಿಯ ನೀರೇ ಕುಡಿಯಲು ಆಧಾರವಾಗಿದೆ.
ಪೈಪ್‌ಲೈನ್‌ಗೆ ವಿರೋಧ: ಎಂ-11 ಕಂಪನಿಯು ಈಗಾಗಲೇ ನಂದಿಕೂರು-ಅಡ್ವೆಯ ಮೂಲಕ ಫಲಿಮಾರುವರೆಗೆ ಶಾಂಭವಿ ನದಿ ನೀರು ಎತ್ತಲು ಮುಂದಾಗಿದ್ದು, ಪೈಪ್‌ಲೈನ್ ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದೆ. ನಂದಿಕೂರಿನಿಂದ ಪಲಿಮಾರಿನವರೆಗೆ ನಡೆಯುತ್ತಿರುವ ಕಾಮಗಾರಿಗೆ ಈಚೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ನಿಲ್ಲಿಸಿದ್ದಾರೆ.
ಕೈಗಾರಿಕಾ ಘಟಕಕ್ಕೆ ಪಲಿಮಾರಿನ ಶಾಂಭವಿ ನದಿಯ ಅಣೆಕಟ್ಟೆಯಿಂದ ನೀರೆತ್ತಿದರೆ ಪಲಿಮಾರು, ಇನ್ನಾ, ಬಳ್ಕುಂಜೆ, ಕರ್ನಿರೆ, ಮುಂಡ್ಕೂರು, ಕವತ್ತಾರು ಸುತ್ತಮುತ್ತಲ ಗ್ರಾಮದ ಕೃಷಿಕರಿಗೆ ಸಮಸ್ಯೆ ಉಂಟಾಗುತ್ತದೆ. ಈ ಭಾಗದ ಕೃಷಿಕರು ಕಬ್ಬು, ಭತ್ತ, ತೆಂಗು, ಅಡಿಕೆ ಬೆಳೆಯುತ್ತಿದ್ದು ನೀರಿನ ಕೊರತೆ ಎದುರಾಗಲಿದೆ ಎನ್ನುತ್ತಾರೆ ರೈತರು.
ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದು ಪಲಿಮಾರು ಗ್ರಾಮ ಪಂಚಾಯಿತಿ ಬಳಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ಇದುವರೆಗೂ ಸ್ಪಂದನೆ ದೊರೆತಿಲ್ಲ.
ಶಾಂಭವಿ ನದಿ ನೀರನ್ನು ಕೈಗಾರಿಕೆಗೆ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ. ಕಂಪೆನಿ ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು, ಯೋಜನೆ ವಿರುದ್ಧ ಪಲಿಮಾರು, ಇನ್ನಾ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ ಗ್ರಾಮಸಭೆ ನಿರ್ಣಯವನ್ನು ಧಿಕ್ಕರಿಸಿ ನೀರು ಬಳಕೆಗೆ ಮುಂದಾಗಿದೆ.
ಕೈಗಾರಿಕಾ ಘಟಕಗಳು ತಳವೂರುವ ಮೊದಲು ಸಾರ್ವಜನಿಕ ಸಭೆಗಳನ್ನು ನಡೆಸಿ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಬೇಕು. ಯಾವ ಸಭೆ ಮಾಡದೆ ಸ್ಥಳೀಯರು ರೈತರೊಂದಿಗೆ ಚರ್ಚಿಸದೆ ಪೈಪ್‌ಲೈನ್ ಕಾಮಗಾರಿ ಮುಂದಾಗಿರುವುದು ಸರಿಯಲ್ಲ ಎನ್ನುತ್ತಾರೆ ಹೋರಾಟಗಾರ ದಿನೇಶ್ ಕೋಟ್ಯಾನ್ ಪಲಿಮಾರು.
ಯೋಜನೆ ವಿರುದ್ಧ ಸಂಘಟಿತ ಹೋರಾಟಕ್ಕೆ ನದಿಯ ಸುತ್ತಮುತ್ತಲ ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದು ಕಾನೂನು ಸಮರಕ್ಕೂ ಕಾನೂನು ತಜ್ಞರ ಸಮಿತಿ ರಚಿಸಲು ಮುಂದಾಗಿದ್ದಾರೆ.
ಹಲವು ಗ್ರಾಮಗಳಿಗೆ ಅನುಕೂಲಕರವಾಗಿರುವ ಶಾಂಭವಿ ಅಣೆಕಟ್ಟೆ ನೀರು ಸ್ಥಳೀಯರ ಹಕ್ಕಾಗಿದೆ. ನದಿ ನೀರು ಕೈಗಾರಿಕೆಗೆ ಬಳಕೆಯಾದರೆ ಅಂತರ್ಜಲ ಕುಸಿದು ಕುಡಿಯುವ ನೀರಿನ ತತ್ವಾರ ಬರಲಿದೆ.- ಸಂದೀಪ್ ಫಲಿಮಾರು ಹೋರಾಟಗಾರ
‘ಕೃಷಿಗೆ ನೀರಿನ ಸಮಸ್ಯೆ’ ಬಳ್ಕುಂಜೆ ಹಾಗೂ ಇನ್ನಾದಲ್ಲಿ ಐದು ಎಕರೆ ಕೃಷಿ ಭೂಮಿ ಇದ್ದು ಭತ್ತ ತೆಂಗು ಅಡಿಕೆ ಬೆಳೆಯುತ್ತಿದ್ದೇನೆ. ಶಾಂಭವಿ ನದಿ ಆಶ್ರಯದಿಂದ ಕೃಷಿ ಮಾಡಬೇಕಾಗಿದ್ದು ನದಿಯ ನೀರು ಕೈಗಾರಿಕೆಗಳಿಗೆ ನೀಡಿದರೆ ನದಿ ಬರಿದಾಗಲಿದ್ದು ಕೃಷಿಗೆ ಸಮಸ್ಯೆಯಾಗುತ್ತದೆ. ಅಂತರ್ಜಲ ಮಟ್ಟ ಕುಸಿತವಾಗುತ್ತದೆ. ಕೃಷಿ ಭೂಮಿ ಬರಡಾಗುತ್ತದೆ ಎನ್ನುತ್ತಾರೆ ಇನ್ನಾ ಗ್ರಾಮದ ಕೃಷಿಕ ಸುರೇಶ್ ಡಿಸೋಜ.
‘ಹೋರಾಟಕ್ಕೆ ಬೆಂಬಲ’ ಕೃಷಿ ಹಾಗೂ ಕುಡಿಯುವ ನೀರಿಗೆ ಪ್ರಮುಖ ಮೂಲವಾಗಿರುವ ಶಾಂಭವಿ ನದಿ ನೀರನ್ನು ಕೈಗಾರಿಕೆಗೆ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ. ಕೈಗಾರಿಕೆಗೆ ಅಗತ್ಯವಿರುವ ನೀರನ್ನು ಪರ್ಯಾಯ ಮೂಲದಿಂದ ಪಡೆಯಬೇಕು. ಸ್ಥಳೀಯರ ಹಾಗೂ ರೈತರ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಶಾಂಭವಿ ನದಿ ಪಾತ್ರವಿರುವ 3 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ ಶಾಸಕರು ಪ್ರತಿಭಟನೆಗೆ ಕೈಜೋಡಿಸಲಿದ್ದಾರೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.