ADVERTISEMENT

ಇಂದಿನಿಂದ ಮಲ್ಪೆಯಲ್ಲಿ ಬೀಚ್‌ ದ್ರಾಕ್ಷಾರಸ ಉತ್ಸವ

ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮ: ಪ್ರಸಿದ್ಧ ಬ್ರಾಂಡ್‌ಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 14:24 IST
Last Updated 17 ಜನವರಿ 2019, 14:24 IST

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಜ.18ರಿಂದ 20ರವರೆಗೆ ಮೂರು ದಿನಗಳ ಅಂತರರಾಷ್ಟ್ರೀಯ ಬೀಚ್‌ ದ್ರಾಕ್ಷಾರಸ ಉತ್ಸವ ನಡೆಯಲಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಅಬಕಾರಿ ಇಲಾಖೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಉತ್ಸವವನ್ನು ಏರ್ಪಡಿಸಲಾಗಿದೆ. ಕರ್ನಾಟಕದಲ್ಲಿ ವೈನ್‌ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಮತ್ತು ರಾಜ್ಯದ ವೈನ್‌ ತಯಾರಿಕೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಿಕೊಡುವುದು ಈ ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸುಮಾರು 10ರಿಂದ 12 ವೈನರಿಗಳು ಭಾಗವಹಿಸಲಿದ್ದಾರೆ. 150ಕ್ಕೂ ವಿವಿಧ ಬ್ರಾಂಡ್‌ಗಳ ವೈನ್‌ಗಳನ್ನು ಪ್ರದರ್ಶಿಸಲಾಗುವುದು. ಹಳೆಯ ವೈನ್‌ ಪ್ರದೇಶಗಳಾದ ಯುರೋಪ್‌ ಖಂಡ ಹಾಗೂ ಹೊಸ ವೈನ್‌ ಪ್ರದೇಶಗಳಾದ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಚಿಲಿ, ಅಮೆರಿಕಾ ಸೇರಿದಂತೆ ಇತರೆ ದೇಶಗಳ ವೈನ್‌ ಪ್ರದರ್ಶನ ಮತ್ತು ಮಾರಾಟ ಸಹ ನಡೆಯಲಿದೆ. ವೈನ್‌ ಸ್ವಾದಿಸುವಾಗ ಬಳಸುವ ಸೂಕ್ತ ಆಹಾರಗಳ ಹಾಗೂ ತಿನಿಸುಗಳ ಮಳಿಗೆಗಳು ಪಾಲ್ಗೊಳ್ಳಲಿವೆ. ಸಂಗೀತ ಹಾಗೂ ಮನೋರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.

ADVERTISEMENT

ವೈನ್‌ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಾಗೂ ದ್ರಾಕ್ಷಿ ಬೆಳೆಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಸಲುವಾಗಿ ಈ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು ಹಾಗೂ ಕಾರವಾರಗಳಲ್ಲಿ ವೈನ್‌ ಮೇಳವನ್ನು ನಡೆಸಲಾಗಿದೆ.

ವೈನ್‌ ದ್ರಾಕ್ಷಿ ಬೆಳೆಯುವ ಹಾಗೂ ವೈನ್‌ ತಯಾರಿಕೆ ಬಗ್ಗೆ ತರಬೇತಿ ನೀಡುವುದು. ವೈನ್‌ ತಯಾರಕರು ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಎಲ್ಲ ವೈನ್‌ ಬ್ರಾಂಡ್‌ ಮಾರಾಟಗಳ ಮೇಲೆ ಶೇ. 10ರಷ್ಟು ರಿಯಾಯಿತಿ ಇರಲಿದೆ. ಮೊದಲ ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ. ನಂತರದ ಎರಡು ದಿನ 20 ಪ್ರವೇಶ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಜ.18ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಉತ್ಸವಕ್ಕೆ ಚಾಲನೆ ನೀಡುವರು. ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ದ್ರಾಕ್ಷಾರಸ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸರ್ವೇಶ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.