ಉಡುಪಿ: ಸಮಾಜದ ಪ್ರತಿಯೊಬ್ಬರೂ ಕಡ್ಡಾಯವಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಇದರಿಂದ ವಂಚನೆಗೆ ಒಳಗಾಗದೆ ಜಾಗೃತವಾಗಿರಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಶರ್ಮಿಳಾ ಹೇಳಿದರು.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಕಾನೂನು ಮಾಪನ ಶಾಸ್ತ್ರ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಮಾರಾಟವಾಗುವ ಪ್ರತಿ ವಸ್ತು, ಸರಕು ಮತ್ತು ಸೇವೆಗಳ ಮೌಲ್ಯ, ವೆಚ್ಚ ಹಾಗೂ ಗುಣಮಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ಗ್ರಾಹಕರಿಗೆ ಸಿಗಬೇಕು. ಗ್ರಾಹಕರ ಹಕ್ಕುಗಳನ್ನು ತಿಳಿಸುವ ಉದ್ದೇಶದಿಂದ ಗ್ರಾಹಕ ದಿನಾಚರಣೆ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆಯೂ ತಿಳಿಸಬೇಕು. ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಜಾರಿಗೆ ತಂದು ಗ್ರಾಹಕರಿಗೆ ನ್ಯಾಯ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರುಗಳನ್ನು ಪ್ರತಿ ಜಿಲ್ಲೆಯಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಬಹುದು. ಗ್ರಾಹಕರಿಗೆ ಸರಕುಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು, ಶಿಕ್ಷಣ ಮತ್ತು ವ್ಯವಹಾರದ ಜಾಗೃತಿ ಹಕ್ಕು, ಅವಧಿ ಮುಗಿದ ಸರಕುಗಳ ಬಗ್ಗೆ ದೂರು ನೀಡುವ ಹಕ್ಕುಗಳನ್ನು ಕಾಯ್ದೆ ನೀಡಿದೆ.
ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಜಿಲ್ಲಾಧ್ಯಕ್ಷ ಸುನಿಲ್ ಟಿ.ಮಾಸರೆಡ್ಡಿ ಮಾತನಾಡಿ, 1962ರಲ್ಲಿ ಅಮೇರಿಕಾದ ಅಧ್ಯಕ್ಷ ಜಾನ್ ಎಫ್.ಕೆನಡಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತಂದರು. ಅಂದಿನಿಂದ ಮಾರ್ಚ್ 15ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
2019ರ ಕಾಯ್ದೆ ಪ್ರಕಾರ ಗ್ರಾಹಕರು ದೂರುಗಳನ್ನು ಆನ್‌ಲೈನ್ ಮುಖಾಂತರವೂ ನೀಡಬಹುದು. ದೂರಿನನ್ವಯ ಪ್ರಕರಣ ದಾಖಲಿಸಿಂಡು ಸೂಕ್ತ ನ್ಯಾಯ ಒದಗಿಸುವ ಅಧಿಕಾರವನ್ನು ಆಯೋಗ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸುರೇಖಾ, ಪ್ರಾಧ್ಯಾಪಕ ಕೆ.ನಾರಾಯಣ, ನಿರ್ದೇಶಕಿ ನಿರ್ಮಲಾ, ಬಳಕೆದಾರರ ವೇದಿಕೆಯ ಮುಖ್ಯಸ್ಥ ಎ.ಪಿ.ಕೊಡಂಚ, ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಸದಸ್ಯೆ ಸುಜಾತಾ ಉಪಸ್ಥಿತರಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪಿ.ಕೆ.ಬಿನೋಯ್ ಸ್ವಾಗತಿಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.