ADVERTISEMENT

17 ಮಂದಿ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ 

ಮುಂಬೈನ ಪದವೀಧರ ಯಕ್ಷಗಾನ ಸಮಿತಿಗೆ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 14:07 IST
Last Updated 17 ನವೆಂಬರ್ 2019, 14:07 IST
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ 17 ಮಂದಿ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಹಾಗೂ ಮುಂಬೈನ ಪದವೀಧರ ಯಕ್ಷಗಾನ ಸಮಿತಿಗೆ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ 17 ಮಂದಿ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಹಾಗೂ ಮುಂಬೈನ ಪದವೀಧರ ಯಕ್ಷಗಾನ ಸಮಿತಿಗೆ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.   

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ, ಯಕ್ಷಗಾನ ಕಲಾರಂಗ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ 17 ಮಂದಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಹಾಗೂ ಮುಂಬೈನ ಪದವೀಧರ ಯಕ್ಷಗಾನ ಸಮಿತಿಗೆ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಯಕ್ಷಗಾನ ಕಲಾವಿದರಾದ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಚೇರ್ಕಾಡಿ ಮಂಜುನಾಥ ಪ್ರಭು, ಪೆರುವಾಯಿ ನಾರಾಯಣ ಭಟ್‌, ಕೆ. ನಾರಾಯಣ ಪೂಜಾರಿ ಉಜಿರೆ, ಕೆ. ಅಣ್ಣಿ ಗೌಡ ಬೆಳ್ತಂಗಡಿ, ಶೀನ ನಾಯ್ಕ ಬ್ರಹ್ಮೇರಿ, ಕೆ.ಪಿ. ಹೆಗಡೆ ಕೋಟ, ನಿಡ್ಲೆ ಗೋವಿಂದ ಭಟ್‌, ಆಜ್ರಿ ಗೋಪಾಲ ಗಾಣಿಗ, ಮೂರೂರು ವಿಷ್ಣು ಭಟ್‌, ಮಹಾಬಲ ದೇವಾಡಿಗ ಕಟ್‌ಬೆಲ್ತೂರ್‌, ಪಡ್ರೆ ಕುಮಾರ, ಅನಂತ ಹೆಗಡೆ ನಿಟ್ಟೂರು, ಎಂ. ಶ್ರೀಧರ ಹೆಬ್ಬಾರ್‌, ತೋಡಿಕಾನ ವಿಶ್ವನಾಥ ಗೌಡ, ನಾಗಪ್ಪ ಗೌಡ ಮತ್ತು ಲಕ್ಷ್ಮಣ ಕೋಟ್ಯಾನ್‌ ಸುಂಕದಕಟ್ಟೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಯಕ್ಷಗಾನ ಕಲಾರಂಗದ ಕಾರ್ಯಕರ್ತ ರಮೇಶ ರಾವ್‌ ಸಾಲಿಗ್ರಾಮ ಅವರಿಗೆ ಯಕ್ಷಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಕಲಾವಿದರೂ ತಮ್ಮ ಇಡೀ ಜೀವನವನ್ನು ಯಕ್ಷಗಾನ ಕಲೆಗಾಗಿ ಸಮರ್ಪಿಸುತ್ತಾರೆ. ತಮ್ಮ ಕಷ್ಟ, ನೋವು, ದುಮ್ಮಾನಗಳೆಲ್ಲವನ್ನೂ ಮರೆತು, ಬಣ್ಣ ಹಚ್ಚಿ ನಮ್ಮೆಲ್ಲರನ್ನು ಖುಷಿ ಪಡಿಸುತ್ತಾರೆ. ನಮ್ಮನ್ನು ರಂಜಿಸಿದ ಸಾಧಕರಿಗೆ ಇಂತಹ ಪ್ರಶಸ್ತಿ, ಸನ್ಮಾನಗಳು ಸಂದಾಗ ಮಾತ್ರ ಅವರ ದುಃಖ, ದುಮ್ಮಾನಗಳಿಗೆ ಪರಿಹಾರ ಸಿಗುತ್ತದೆ ಎಂದರು.
ಕಲಾರಂಗ ಕಲಾವಿದರಿಗೆ ಕಲಾವಿದನ ಎರಡು ಮುಖವನ್ನು ನೋಡಿದೆ. ಬಣ್ಣ ಹಚ್ಚಲು ಅವಕಾಶ ಕಲ್ಪಿಸುವುದರ ಜತೆಗೆ ಅವರ ಬಣ್ಣವನ್ನು ತೆಗೆದು ಪ್ರಶಸ್ತಿ ನೀಡುವ ಕೆಲಸವನ್ನು ಮಾಡುತ್ತಿದೆ. ಇದು ಸರ್ಕಾರ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಜಿ. ಶಂಕರ್‌ ಮಾತನಾಡಿ, ಯಕ್ಷಗಾನ ಕಲಾರಂಗ ಸಂಸ್ಥೆ ಯಕ್ಷಗಾನ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕಿತ್ತು. ಆದರೆ ಅದು ತಪ್ಪಿ ಬೇರೆ ಕಡೆ ಹೋಗಿದೆ. ಆದ್ದರಿಂದ ಮುಂದಿನ ಬಾರಿ ಸಂಸ್ಥೆಗೆ ಪ್ರಶಸ್ತಿ ದೊರಕಿಸಿಕೊಡಲು ನಾವು ಪ್ರಯತ್ನ ಮಾಡುತ್ತೇವೆ ಎಂದರು.

ಸಿಂಡಿಕೇಟ್‌ ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ್‌ ಹಂದೆ, ಕರ್ನಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಎಂ. ಚಂದ್ರಶೇಖರ್‌, ಮುಂಬೈ ಪದವೀಧರ ಯಕ್ಷಗಾನ ಸಮಿತಿಯ ಎಚ್‌.ಬಿ.ಎಲ್‌. ರಾವ್‌ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.