ADVERTISEMENT

ಝೈನುಲ್ ಉಲಮಾ ಮಾಣಿ ಉಸ್ತಾದ್ ನೂತನ ಖಾಝಿ

ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್‌ಗೆ ಸರ್ವಾನುಮತದಿಂದ ನೇಮಕ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:01 IST
Last Updated 5 ಅಕ್ಟೋಬರ್ 2020, 14:01 IST
ಝೈನುಲ್ ಉಲಮಾ ಮಾಣಿ ಉಸ್ತಾದ್
ಝೈನುಲ್ ಉಲಮಾ ಮಾಣಿ ಉಸ್ತಾದ್   

ಉಡುಪಿ: ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್‌ನ ನೂತನ ಖಾಝಿಯಾಗಿ ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ವಿದ್ವಾಂಸ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಮಾತ್ ನಿರ್ದೇಶಕ ಯು.ಕೆ. ಮುಸ್ತಫ ಸಹದಿ ತಿಳಿಸಿದರು.

ನಗರದ ಮಣಿಪಾಲ ಇನ್‌ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಜುಲ್ ಫುಖಹಾ ಬೇಕಲ್‌ ಉಸ್ತಾದ್ ಅವರ ನಿಧನದಿಂದ ತೆರವಾಗಿದ್ದ ಖಾಝಿ ಸ್ಥಾನಕ್ಕೆ ಸಂಯುಕ್ತ ಜಮಾತ್‌ನ ಸರ್ವ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಸಿ ನೂತನ ಖಾಝಿಯನ್ನು ಆಯ್ಕೆ ಮಾಡಲಾಗಿದೆ.

ಅ.10ರಂದು ಬೆಳಿಗ್ಗೆ 10 ಗಂಟೆಗೆ ಮೂಳೂರು ಕೇಂದ್ರ ಮಸೀದಿಯಲ್ಲಿ ಖಾಝಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ಬಳಿಕ 11 ಗಂಟೆಗೆ ನಿಧನರಾದ ಶೈಖುನಾ ಖಾಝಿ ಬೇಕಲ ಉಸ್ತಾದ ಸ್ಮರಣಾರ್ಥ ಜಿಲ್ಲಾ ಮಟ್ಟದ ಪ್ರಾರ್ಥನಾ ಮಜ್ಲಿಸ್‌ ಹಾಗೂ ಅನುಸ್ಮರಣಾ ಸಂಗಮ ಕಾರ್ಯಕ್ರಮ ನಡೆಯಲಿದೆ. ಸಾದಾತುಗಳು, ಉನ್ನತ ಉಲಮಾಗಳು, ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಸಂಯುಕ್ತ ಜಮಾತ್ ವ್ಯಾಪ್ತಿಯಲ್ಲಿ ಬರುವ ಉಡುಪಿ ಜಿಲ್ಲೆಯ 100 ಮಸೀದಿಗಳಿಗೆ ಝೈನುಲ್‌ ಉಲಮಾ ಎಂ.ಅಬ್ದುಲ್ ಹಮೀದ್‌ ಮುಸ್ಲಿಯಾರ್ ಮಾಣಿ ಉಸ್ತಾದ್ ಖಾಝಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗೂ ಇವರನ್ನೇ ಆಯ್ಕೆಮಾಡಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಜಮಾತ್‌ ಮುಖಂಡರು ಖಾಝಿ ಆಯ್ಕೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

1997ರಲ್ಲಿ ಜಿಲ್ಲಾ ಖಾಝಿಯಾಗಿ ನೇಮಕಗೊಂಡಿದ್ದ ಬೇಕಲ ಉಸ್ತಾದ್ ಅವರು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು ವ್ಯಾಪ್ತಿಯ 200ಕ್ಕೂ ಹೆಚ್ಚು ಮೊಹಲ್ಲಾಗಳ ಖಾಝಿಗಳಾಗಿ 23 ವರ್ಷ ಸೇವೆ ಸಲ್ಲಿಸಿದ್ದರು ಎಂದು ಮುಸ್ತಫ ಸಹದಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್‌ ರೆಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, ಮೂಳೂರು ಕೇಂದ್ರ ಮಸೀದಿ ಅಧ್ಯಕ್ಷ ಎಂಎಚ್‌ಬಿ ಮೊಹಮ್ಮದ್, ಎಚ್.ಐ.ಯೂಸಫ್‌ ಸಖಾಫಿ ಕೋಡಿ, ಅಶ್ರಫ್‌ ಸಖಾಫಿ ಕನ್ನಂಗಾರ್, ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲು, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಎಚ್.ಬಿ.ಮೊಹಮ್ಮದ್ ಕನ್ನಂಗಾರ್, ಅಬ್ದುರ್‌ ರೆಹ್ಮಾನ್ ಸಖಾಫಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.