ADVERTISEMENT

ಅಂಗವಿಕಲರಿಗಾಗಿ ಬ್ಯಾಟರಿ ಚಾಲಿತ ಟ್ರೈಸಿಕಲ್

ಅಂಜುಮನ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 10:27 IST
Last Updated 21 ಜೂನ್ 2013, 10:27 IST

ಭಟ್ಕಳ: ಅಂಗವಿಕಲರಿಗಾಗಿ ಬ್ಯಾಟರಿ ಚಾಲಿತ ಟ್ರೈಸಿಕಲ್ ನಿರ್ಮಿಸುವ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಮಹಮ್ಮದ್ ಹುನೈನ್ ಅಮ್ಜದ್ ಶಾಬಂದ್ರಿ, ಮಹ್ಮದ್ ಇಮ್ರಾನ್ ರುಕ್ನುದ್ದೀನ್, ನೂನ್ ಅಹ್ಮದ್ ಶಬ್ಬೀರ್ ಎ ಸಿದ್ದಿಖಿ, ಶುಯೆಬ್ ಶೇಖ್ ಇವರು, ಪ್ರಾಂಶುಪಾಲ ಡಾ.ಉದಯಪ್ರಸನ್ನ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಖಾಲಿದ್ ಹುಸೇನ್ ಎಂ.ಟಿ, ಪ್ರೊ.ಮೊಹ್ಮದ್ ಇಬ್ರಾಹಿಂ, ಪ್ರೊ ಅನಂತಮೂರ್ತಿ ಶಾಸ್ತ್ರಿ, ಉಪನ್ಯಾಸಕ ಮೊಹ್ಮದ್ ಅವ್ವದ್ ಚಾಮುಂಡಿ ಅವರ ಮಾರ್ಗದರ್ಶನದಲ್ಲಿ ಈ ಟ್ರೈಸಿಕಲ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

`ಅಂಗವಿಕಲರು ಒಂದೇ ಕೈಯಿಂದ ಬಳಸಲು ಸಾಧ್ಯವಾಗುವಂತೆ ಟ್ರೈಸಿಕಲ್‌ನ ಹ್ಯಾಂಡಲ್‌ನ್ನು ಅಳವಡಿಸಲಾಗಿದೆ. ತಾಸಿಗೆ ಸುಮಾರು 20 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. 12 ವೋಲ್ಟ್‌ನ ಮೂರು ವಿಭಿನ್ನ ಪ್ರತ್ಯೇಕ ಬ್ಯಾಟರಿ ಹಾಗೂ 36 ವೋಲ್ಟ್ ಡಿಸಿ ಬ್ಯಾಟರಿ ಅಳವಡಿಸಲಾಗಿದೆ. ಆರು ತಾಸುಗಳ ಕಾಲ ಬ್ಯಾಟರಿಯನ್ನು ಚಾರ್ಜ್ ಮಾಡಿದಲ್ಲಿ ಸುಮಾರು ಮೂರು ತಾಸು ಟ್ರೈಸಿಕಲ್‌ನ್ನು ಓಡಿಸಬಹುದು' ಎನ್ನುತ್ತಾರೆ ಅದನ್ನು ತಯಾರಿಸಿದ ವಿದ್ಯಾರ್ಥಿಗಳು.

ಈ ಟ್ರೈಸಿಕಲ್ ನಿರ್ಮಾಣಕ್ಕೆ ಉತ್ತಮ ದರ್ಜೆಯ ಬಿಡಿಭಾಗಗಳು, ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಸುಮಾರು 30 ಸಾವಿರ ರೂಪಾಯಿ ವೆಚ್ಚವಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರೆ ಅತಿ ಕಡಿಮೆ ವೆಚ್ಚದಲ್ಲಿ ಈ ಟ್ರೈಸಿಕಲ್ ಅನ್ನು ನಿರ್ಮಿಸಬಹುದು ಎಂದು ಹೇಳುವ ವಿದ್ಯಾರ್ಥಿಗಳು ಅಂಗವಿಕಲರಿಗೆ ಇದೊಂದು ವರದಾನವಾಗಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.