ADVERTISEMENT

ಅಗಸೂರಿನಲ್ಲಿ ನಾಗಶಿಲ್ಪಗಳು ಪತ್ತೆ...!

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:00 IST
Last Updated 15 ಜನವರಿ 2012, 10:00 IST
ಅಗಸೂರಿನಲ್ಲಿ ನಾಗಶಿಲ್ಪಗಳು ಪತ್ತೆ...!
ಅಗಸೂರಿನಲ್ಲಿ ನಾಗಶಿಲ್ಪಗಳು ಪತ್ತೆ...!   

ಅಂಕೋಲಾ: ತಾಲ್ಲೂಕಿನ ಅಗಸೂರು ಗ್ರಾಮದ ಜನತಾ ಪ್ಲಾಟ್ ಸಮೀಪ ದಲ್ಲಿನ ಬೆಟ್ಟ ಪ್ರದೇಶದಲ್ಲಿ ಶನಿವಾರ ಶೇಡಿಮಣ್ಣನ್ನು ಅಗೆಯುತ್ತಿದ್ದಾಗ ಮೂರು ನಾಗಶಿಲ್ಪಗಳು ದೊರೆತಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿವೆ. 
ಸಂಕ್ರಾಂತಿಯ ದಿವಸ ಶೇಡಿಮಣ್ಣನ್ನು ತಂದು ಅಂಗಳವನ್ನು ಸಿದ್ಧಪಡಿಸುವುದು ವಾಡಿಕೆಯಾಗಿದ್ದು, ಕೆಲವು ಸ್ಥಳೀಯರು ಪ್ರತಿ ವರ್ಷದಂತೆ ಈ ಪ್ರದೇಶದಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಶಿಲ್ಪಗಳು ಕಂಡು ಬಂದಿವೆ.  ಗುಡ್ಡದ ಮೇಲ್ಭಾಗದಲ್ಲಿ ಭಾರಿ ಗಾತ್ರದ ಹುತ್ತವಿದ್ದ ಬಗ್ಗೆ ಮತ್ತು ಅಲ್ಲಿ ನಾಗರ ಹಾವುಗಳು ನೆಲೆಸಿರುವ ಕುರಿತು ವದಂತಿಗಳು ಹರಡಿದ್ದು, ಈ ನಾಗಶಿಲ್ಪಗಳು ಯಾವುದೋ ಕಾಲದಲ್ಲಿ ಹರಕೆ ಹೊತ್ತ ಭಕ್ತಾಧಿಗಳಿಂದ ಪ್ರತಿಷ್ಠಾಪನೆಗೊಂಡಿರಬಹುದು ಎಂಬ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಇಲ್ಲಿ ನಾಗಬನವಿರುವ ಕುರಿತು ಮಾಹಿತಿ ನೀಡಿರುವ ಗ್ರಾಮದ ಪ್ರಮುಖರಾದ ರಾಮಚಂದ್ರ ನಾಯಕ, ವಿಷ್ಣು ನಾಯ್ಕ ಅಗಸೂರು, ಸುರೇಶ ನಾಯ್ಕ ಮತ್ತು ಪ್ರಾಧ್ಯಾಪಕ ಐ.ಬಿ. ಪೂಜಾರಿ ಈ ಸ್ಥಳದಲ್ಲಿ ಉತ್ಖತನ ನಡೆಸಿದರೆ ಇನ್ನಷ್ಟು ಶಿಲ್ಪಗಳು ದೊರೆಯಬಹುದೆಂದು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. 

ಕಪ್ಪು ಗ್ರಾನೈಟ್ ಶಿಲೆಯಲ್ಲಿ ಉಬ್ಬುಶಿಲ್ಪದಂತೆ ಕೆತ್ತಲಾಗಿರುವ ಒಂದು ಶಿಲ್ಪದಲ್ಲಿ ಎರಡು ನಾಗಗಳು ಮೇಲ್ಮುಖವಾಗಿ, ಮಧ್ಯದ ಒಂದು ನಾಗ ಕೆಳಮುಖವಾಗಿ ಕಂಡುಬಂದಿದೆ, ಮತ್ತೊಂದು ಶಿಲ್ಪದಲ್ಲಿ ಮೂರು ನಾಗಗಳು ಮೇಲ್ಮುಖವಾಗಿವೆ, 3ನೇ ಶಿಲ್ಪದಲ್ಲಿ ಒಟ್ಟು ಐದು ನಾಗಗಳಿದ್ದು, ಎರಡು ಕೆಳಮುಖವಾಗಿ, ಮೂರು ಮೇಲ್ಮುಖವಾಗಿ ಕಂಡು ಬಂದಿವೆ. ಸಂಕ್ರಾಂತಿಯ ದಿನದಂದು ಬೆಳಕಿಗೆ ಬಂದ  ಅನಾಮಿಕ ಶಿಲ್ಪಿಯ ಈ ಕೆತ್ತನೆಗಳು ಗ್ರಾಮಸ್ಥರಲ್ಲಿನ ಭಯ ಭಕ್ತಿಯನ್ನು ಇಮ್ಮಡಿಗೊಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.