ADVERTISEMENT

ಅಡಿಕೆ ಮರಕ್ಕೆ ಎಲೆ ಸುಡುವ ರೋಗ: ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:56 IST
Last Updated 5 ಡಿಸೆಂಬರ್ 2013, 8:56 IST

ಶಿರಸಿ: ತಾಲ್ಲೂಕಿನ ಮಣಜವಳ್ಳಿ ಗ್ರಾಮ ಮತ್ತು ಜಡ್ಡಿಗದ್ದೆಯ ಮಣ್ಮನೆ, ಗಮಯನಜಡ್ಡಿ ಭಾಗಗಳ ಅಡಿಕೆ ತೋಟಗಳಲ್ಲಿ ಅಡಿಕೆ ಎಲೆಗಳಿಗೆ ಎಲೆ ಸುಡುವ ರೋಗ ದಾಳಿ ಇಟ್ಟಿದೆ. ನೂರಾರು ಅಡಿಕೆ ಮರಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಮರಗಳು ಸಾಯುವ ಹಂತದಲ್ಲಿವೆ.

ಅಡಿಕೆ ಮರದ ಚಂಡೆಯ ಕೆಳ ಭಾಗದ ಎಲೆಗಳ ಮೇಲೆ ಮೊದಲು ಚುಕ್ಕೆಯಂತೆ ಈ ರೋಗ ಕಾಣಿಸಿಕೊಳ್ಳುತ್ತದೆ. ನಂತರ ಎಲೆಗಳು ತುದಿಯಿಂದ ಒಣಗಲು ಪ್ರಾರಂಭವಾಗಿ, ಇಡೀ ಗರಿ ಒಣಗಿ ಕಡ್ಡಿ ಮಾತ್ರ ಉಳಿಯುತ್ತದೆ, ರೋಗ ಉಲ್ಬಣಿಸಿದಾಗ ಮರದ ಎಲ್ಲ ಎಲೆಗಳು ಒಣಗಿ ಮರ ಸಾಯುವ ಹಂತ ತಲುಪುತ್ತದೆ.

ಸಾಮಾನ್ಯವಾಗಿ ಈ ರೋಗವು ಜಾಸ್ತಿ ಬಿಸಿಲು ತಾಗುವ, ಹಳೆಯ ಎತ್ತರದ ಮರಗಳ ಮೇಲೆ ಮೊದಲು ದಾಳಿ ಇಡುತ್ತದೆ.  ಪೋಟ್ಯಾಶ್‌ ಪೋಷಕಾಂಶದ ಕೊರತೆಯಿಂದ ಬಳಲುವ ಮರಗಳು ಸುಲಭವಾಗಿ ರೋಗಕ್ಕೆ ತುತ್ತಾಗುತ್ತವೆ. ಮಣಜವಳ್ಳಿ ಸಮೀಪದ ಬೆಳ್ಳೆಮನೆಯ ವಿದ್ಯಾಧರ ಹೆಗಡೆ ಅವರ ತೋಟದಲ್ಲಿ 30ಕ್ಕೂ ಹೆಚ್ಚು ಮರಗಳಿಗೆ ರೋಗ ತಗುಲಿದರೆ, ಗಮಯನಜಡ್ಡಿಯ ಗಜಾನನ ಭಟ್ಟ ಅವರ ತೋಟದಲ್ಲಿ 200ಕ್ಕೂ ಅಧಿಕ ಮರಗಳು ಎಲೆ ಒಣಗಿಸಿ ನಿಂತಿವೆ.

ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್‌ನ ವಿ.ಎಂ.ಹೆಗಡೆ ಹಾಗೂ ಟಿಎಂಎಸ್‌ನ ಕೃಷಿ ಸಲಹೆಗಾರ ಕಿಶೋರ ಹೆಗಡೆ ಇತ್ತೀಚೆಗೆ ಈ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲೆ ಸುಡುವ ರೋಗ ನಿಯಂತ್ರಿಸಲು ಹಾರ್ಟಿ ಕ್ಲಿನಿಕ್‌ ರೈತರಿಗೆ ಕೆಲವು ಸಲಹೆಗಳನ್ನು ನೀಡಿದೆ.

ರೋಗ ಕಂಡು ಬಂದ ಮರಗಳಿಗೆ ಕಾರ್ಬ್‌ಂಡೆಂಜಿಂ 1ಗ್ರಾಂ ಮತ್ತು ಮ್ಯಾಂಕೋಜೆಬ್ 3 ಗ್ರಾಂ ಪ್ರತಿ ಲೀಟರ್‌ ನೀರಿಗೆ ಸೇರಿಸಿ ಸಿಂಪಡಿಸಬೇಕು. ಪ್ರತಿ ಮರಕ್ಕೆ 100ಗ್ರಾಂ ಯೂರಿಯಾ ಮತ್ತು 200 ಗ್ರಾಂ ಮ್ಯುರಿಯೇಟ್ ಆಫ್‌ ಪೋಟ್ಯಾಶ್‌ ಗೊಬ್ಬರವನ್ನು ಮರದ ಬುಡದಿಂದ ಒಂದೂವರೆ ಅಡಿ ದೂರದಲ್ಲಿ ತೇವಾಂಶವಿರುವಾಗ ಹಾಕಬೇಕು.

ಈ ರೋಗವು ಫೆಬ್ರುವರಿ, ಮಾರ್ಚ್‌ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ತೋಟದ ಎಲ್ಲ ಅಡಿಕೆ ಮರಗಳ ಕೆಳಗಿನ 4-5 ಎಲೆಗಳಿಗೆ ಈ ಮೇಲಿನ ಔಷಧಿ ಮಿಶ್ರಣವನ್ನು ಸಿಂಪರಣೆ ಕೊಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಹಾರ್ಟಿ ಕ್ಲಿನಿಕ್‌ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.