ADVERTISEMENT

ಉದುರುವ ಅಡಿಕೆ: ಪತ್ತೆಯಾಗದ ರೋಗ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:42 IST
Last Updated 20 ಜುಲೈ 2013, 9:42 IST

ಶಿರಸಿ: ತಾಲ್ಲೂಕಿನ ಬೆಣಗಾಂವ ಗ್ರಾಮದ ನುಜಿಗೆಮನೆಯಲ್ಲಿ ಅಡಿಕೆಗೆ ವಿಚಿತ್ರ ರೋಗ ತಗುಲಿದ್ದು, ತೋಟದಲ್ಲಿ ಅಡಿಕೆ ಕಾಯಿಗಳು ಉದುರುತ್ತಿವೆ. ಮರದ ಬುಡದಲ್ಲಿ ಅರೆ ಬಲಿತ ಅಡಿಕೆ ಕಾಯಿಗಳು ಉದುರಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.

ನುಜಿಗೆಮನೆಯ ಸತ್ಯನಾರಾಯಣ ಭಟ್ಟ ಅವರ ತೋಟದಲ್ಲಿ ಈ ರೀತಿ ಅಡಿಕೆ ಉದುರುವ ರೋಗ 2007ರಲ್ಲೇ ಪ್ರಾರಂಭವಾಗಿದೆ. ಮೊದಲ ವರ್ಷ ಕೇವಲ ಮೂರು ಮರಕ್ಕೆ ಬಂದಿದ್ದ ರೋಗ ಎರಡನೇ ವರ್ಷ 10 ಮರಗಳಿಗೆ ಹರಡಿ, ಒಟ್ಟು ಏಳು ಎಕರೆ ತೋಟದಲ್ಲಿ ಈಗ ನೂರಾರು ಮರಗಳನ್ನು ಆಕ್ರಮಿಸಿದೆ. ಇದರಿಂದಾಗಿ ಪ್ರತಿ ವರ್ಷ ಅವರಿಗೆ 15-18 ಕ್ವಿಂಟಲ್ ಅಡಿಕೆ ನಷ್ಟವಾಗುತ್ತಿದೆ.

`ಒಂದು ಮರದ ಕಾಯಿ ಉದುರಲು ಪ್ರಾರಂಭವಾದರೆ ಮೂರು ದಿನಗಳಲ್ಲಿ ಇಡೀ ಮರ ಖಾಲಿಯಾಗುತ್ತದೆ. ಹಾಗೆಂದು ಒಂದೇ ಸಾಲಿನಲ್ಲಿರುವ ಎಲ್ಲ ಮರಗಳ ಅಡಿಕೆ ಕಾಯಿ ಉದುರುವುದಿಲ್ಲ. ರೋಗ ಬಂದಿರುವ ಮರದ ಕಾಯಿಗಳು ಮಾತ್ರ ವ್ಯಾಪಕವಾಗಿ ಉದುರುತ್ತವೆ. ವರ್ಷದಿಂದ ವರ್ಷಕ್ಕೆ ಈ ರೋಗ ಉಲ್ಬಣಗೊಳ್ಳುತ್ತಿದ್ದು, ಕಾರಣ ಪತ್ತೆಯಾಗಿಲ್ಲ. ಇದು ಕೊಳೆರೋಗ ಅಲ್ಲ.  ತೋಟಕ್ಕೆ ಕೊಳೆರೋಗ ಕಾಲಿಟ್ಟಿಲ್ಲ' ಎಂದು ಸತ್ಯನಾರಾಯಣ ಭಟ್ಟ ಹೇಳುತ್ತಾರೆ.

`ನಾಲ್ಕು ವರ್ಷಗಳ ಹಿಂದೆ ತೋಟಗಾರಿಕಾ ಇಲಾಖೆ ವಿಷಯ ತಜ್ಞರ ಮಾರ್ಗದರ್ಶನದಲ್ಲಿ ತೋಟದ ಮಣ್ಣು ಪರೀಕ್ಷೆ ಮಾಡಿಸಿ, ಕೊರತೆಯಿರುವ ಪೋಷಕಾಂಶ ನೀಡಲಾಗಿದೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಸ್ವತಃ ಪ್ರಯೋಗ ಮಾಡಿ ಅನುಭವ ಇದ್ದಿದ್ದರಿಂದ, ಕೀಟ ಬಾಧೆ ಇದ್ದರೆ ನಾಶವಾಗಲೆಂದು ಏಪ್ರಿಲ್-ಮೇ ತಿಂಗಳ ಹೊತ್ತಿಗೆ ತೋಟದಲ್ಲಿ ಹೊಗೆ ಹಾಕಿದೆ.

ಮರದ ಬುಡದಲ್ಲಿ ಫೊರೇಟ್ ಕೀಶನಾಶಕ ಒದಗಿಸಿದೆ. ಇದ್ಯಾವುದರಿಂದಲೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಪ್ರತಿ ಮಳೆಗಾಲದಲ್ಲಿ ಜೂನ್‌ದಿಂದ ಸೆಪ್ಟೆಂಬರ್ ತನಕ ಅಡಿಕೆ ಉದುರುತ್ತದೆ. ರೋಗ ಬಂದಿರುವ ಮರ ಮೂರು ವರ್ಷಗಳಲ್ಲಿ ಸಾಯುತ್ತದೆ' ಎಂದು ಅವರು ವಿವರಿಸಿದರು.

ಪೋಷಕಾಂಶ ಕೊರತೆ
`ಪೋಷಕಾಂಶದ ಕೊರತೆಯಿಂದಲೇ ಈ ರೋಗ ಬರುತ್ತಿದೆ. ಈ ಹಿಂದೆ ನೀಡಿರುವ ಪೋಷಕಾಂಶ ಸಾಕಾಗಿಲ್ಲ. ಮತ್ತೊಮ್ಮ ಈ ತೋಟದ ಮಣ್ಣು ಪರೀಕ್ಷೆ ಆಗಬೇಕಾಗಿದೆ' ಎಂದು ಶುಕ್ರವಾರ ಸತ್ಯನಾರಾಯಣ ಭಟ್ಟರ ತೋಟಕ್ಕೆ ಭೇಟಿ ನೀಡಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಅಣ್ಣಪ್ಪ ನಾಯ್ಕ, ಎನ್.ಡಿ. ಮಡಿವಾಳ ಹಾಗೂ ವಿಷಯ ತಜ್ಞ ವಿಜಯೇಂದ್ರ ಹೆಗಡೆ ಹೇಳಿದರು.

ಸಂಪಖಂಡ ಗದ್ದೆಮನೆಯ ಮಹಾಬಲೇಶ್ವರ ಭಟ್ಟ, ಕೂಗ್ತೆಮನೆಯ ದೇವರು ಹೆಗಡೆ ಅವರ ತೋಟದಲ್ಲೂ ಅಡಿಕೆಗೆ ಇದೇ ರೀತಿಯ ರೋಗ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.