ADVERTISEMENT

ಎಲ್ಲರ ಚಿತ್ತ ಬಾಳಿಗಾ ಕಾಲೇಜಿನತ್ತ

ಕಾಲೇಜು ಮೈದಾನದಲ್ಲಿ ಶಾಮಿಯಾನ, ಆಸನಗಳ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:15 IST
Last Updated 13 ಮೇ 2018, 10:15 IST

ಕುಮಟಾ: ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲರ ಚಿತ್ತ ಇಲ್ಲಿಯ ಹೆಗಡೆ ರಸ್ತೆಯಲ್ಲಿರುವ ಡಾ.ಎ.ವಿ.ಬಾಳಿ ಕಲಾ–ವಿಜ್ಞಾನ ಮಹಾವಿದ್ಯಾಲಯ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ.

ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಹೋಗಲು ನಾಮಫಲಕ ಅಳವಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ನಾಯಿ ಕೊಡೆಗಳಂತೆ ಕಾಲೇಜು ರಸ್ತೆಯಲ್ಲಿ ಎರಡು ಬದಿ ತಲೆ ಎತ್ತಿದ್ದ ಚಹ, ಬೋಂಡಾ, ಎಗ್ ರೈಸ್, ಚಿಕನ್ ಕಬಾಬ್, ತರಕಾರಿ, ಟೈಲರ್ ಅಗಂಡಿಗಳನ್ನು ಸ್ಥಳೀಯ ಪುರಸಭೆ ಎತ್ತಂಗಡಿ ಮಾಡಿ ಶುಚಿ ಗೊಳಿಸಿದೆ. ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಬರುವ ವಾಹನಗಳ ಸುಗಮ ಸಂಚಾರ, ನಿಲುಗಡೆಗೆ ಅನುಕೂಲವಾಗಲಿದೆ.ಕಾಲೇಜು ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ನಾಲ್ಕೂ ದಿಕ್ಕಿಗೆ ಪೊಲೀಸ್ ಕಾವಲಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ಟೆಂಟ್ ನಿರ್ಮಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ವೀಕ್ಷಕರು ಮುಂತಾದ ಹಿರಿಯ ಅಧಿಕಾರಿಗಳ ಕಾರುಗಳು ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

ಯಾವ ಕ್ಷೇತ್ರಗಳ ಮತ ಎಣಿಕೆ ಎಲ್ಲಿ ಎನ್ನುವ ವಿವರವಾದ ಮಾಹಿತಿ ಫಲಕ ಅಳವಡಿಸಲಾಗಿದೆ. ಪಾಸ್ ಪಡೆದು ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಕುಳಿತುಕೊಳ್ಳಲು, ಚಹಾ ತಿಂಡಿ ವಿತರಿಸಲು ಅನುಕೂಲವಾಗುವಂತೆ ಕಟ್ಟಡದ ನಡುವಿನ ಮೈದಾನದಲ್ಲಿ ಶಾಮಿಯಾನ ಹಾಕಲಾಗಿದೆ. ಎದುರು ಗಡೆಯಿಂದ ಹಿರಿಯ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗೆ ಮಾತ್ರ ಪ್ರವೇಶ ಅವಕಾಶವಿದ್ದರೆ ಹಿಂಬದಿ ದ್ವಾರದಲ್ಲಿ ಉಳಿದವರಿಗೆ ಅವಕಾಶ ಕಲ್ಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.