ADVERTISEMENT

ಕಟ್, ಪೇಸ್ಟ್ ವರದಿ ಬೇಡ: ಹೆಗಡೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:00 IST
Last Updated 14 ಸೆಪ್ಟೆಂಬರ್ 2011, 6:00 IST
ಕಟ್, ಪೇಸ್ಟ್ ವರದಿ ಬೇಡ: ಹೆಗಡೆ
ಕಟ್, ಪೇಸ್ಟ್ ವರದಿ ಬೇಡ: ಹೆಗಡೆ   

ಕಾರವಾರ: ಕೇವಲ ಹಣಗಳಿಕೆ ಹಾಗೂ ರೆಸಾರ್ಟ್ ಸಂಸ್ಕೃತಿಗೆ ಮಣೆ ಹಾಕದೇ ಉತ್ತರ ಕನ್ನಡ ಜಿಲ್ಲೆಯ ವೈಶಿಷ್ಟ್ಯ, ಸೂಕ್ಷ್ಮ ಪರಿಸರ, ಸಂಸ್ಕೃತಿ ಪರಂಪರೆ, ಜನಜೀವನ, ಧಾರ್ಮಿಕ ಕ್ಷೇತ್ರ, ಜೀವವೈವಿಧ್ಯ ಹಾಗೂ ಮೌಲ್ಯಗಳನ್ನು ಗಮನಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸ್ತಾವ ತಯಾರಿಸಬೇಕು ಎಂದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಾಸ್ಟರ್ ಪ್ಲಾನ್ ತಯಾರಿಸುವ ಜವಾಬ್ದಾರಿ ಹೊತ್ತಿರುವ ಬೆಂಗಳೂರಿನ ಫಿಡ್ ಬ್ಯಾಕ್ ಇಂಫ್ರಾ ಪ್ರೊಫೈಲ್‌ನ ಪ್ರತಿನಿಧಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೆಸಾರ್ಟ್ ಸಂಸ್ಕೃತಿಯಿಂದಾಗಿ ಪರಂಪರೆ, ಜೀವನದ ಮೌಲ್ಯಗಳಿಗೆ ಧಕ್ಕೆಯುಂಟಾಗುತ್ತಿದೆ ಎಂದರು.

ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡದೆ ಸ್ಥಳೀಯ ಜನಜೀವನ, ಪರಿಸರ ಹಾಗೂ ಮೌಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಂಸದರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಇಡೀ ರಾಜ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿದೆ. ಮಠ-ದೇವಾಲಯಗಳು ಸೂಕ್ಷ್ಮ ಪರಿಸರ, ಜೀವವೈವಿಧ್ಯತೆ, ಬುಡಕಟ್ಟು ಸಮುದಾಯ, ಸ್ಥಳೀಯ ಉತ್ಪನ್ನಗಳು, ಸ್ಥಳೀಯ ಸಂಸ್ಕೃತಿ, ಕಲೆ ಪರಂಪರೆಯನ್ನು ಅಧ್ಯಯನ ಮಾಡಿದ ನಂತರವೇ ಪ್ರಸ್ತಾವ ತಯಾರಿಸಬೇಕು ಎಂದರು.

ಒಂದೆರಡು ದಿನ ಸುತ್ತಾಡಿ ನಂತರ ಬೆಂಗಳೂರಿನಲ್ಲಿ ಕುಳಿತು ಕಚೇರಿಯಲ್ಲಿ ಲಭ್ಯವಾಗುವ ಮಾಹಿತಿ ಸಂಗ್ರಹಿಸಿ ಕಟ್ ಅಂಡ್ ಪೇಸ್ಟ್ ಮಾಡಿದ ಪ್ರಸ್ತಾವ ಬೇಡ. ಜಿಲ್ಲೆಯ ವೈವಿಧ್ಯವನ್ನು ಅಧ್ಯಯನ ಮಾಡಿ ಇಲ್ಲಿಯ ನಾಗರಿಕರನ್ನು ಹಾಗೂ ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ವಿವರವಾದ ಮಾಹಿತಿ ಸಂಗ್ರಹಿಸಿದ ನಂತರವೇ ಪ್ರಸ್ತಾವ ತಯಾರಿಸುವಂತೆ ಅನಂತಕುಮಾರ ಹೆಗಡೆ ತಿಳಿಸಿದರು.

ಪರಿಸರವಾದಿ ಶಿವಾನಂದ ಕಳವೆ ಮಾತನಾಡಿ, ಪ್ರವಾಸೋದ್ಯಮದ ಜೊತೆ ಸ್ಥಳೀಯರ ಜನ-ಜೀವನ ಅಭಿವೃದ್ಧಿಯನ್ನು ಸಹ ಗಮನಿಸಬೇಕಿದೆ. ಪ್ರವಾಸಿ ಕೇಂದ್ರಗಳಲ್ಲಿ ಜಿಲ್ಲೆಯ ಸ್ಥಳೀಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕರಕುಶಲವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಬೇಕು ಎಂದರು.

ಹೋರಾ ಸಂಸ್ಥೆಯ ನಿರ್ದೇಶಕ ಸುಹಾಸ್ ಹೆಗಡೆ ಮಾತನಾಡಿ, ರೆಸಾರ್ಟ್ ಸಂಸ್ಕೃತಿ ಹಾಗೂ ಕೇವಲ ಹಣಗಳಿಕೆಯ ಹಾಗೂ ಮಜಾ ಉಡಾಯಿಸುವ ಪ್ರವಾಸೋದ್ಯಮಕ್ಕೆ ಒತ್ತು ನೀಡಬಾರದು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಪಾಲಕೃಷ್ಣ ಬೇಕಲ್ ಮಾತನಾಡಿ, ನಾಲ್ಕೈದು ಪ್ರವಾಸಿ ಕೇಂದ್ರಗಳನ್ನು ಕೂಡಿಸುವ ಚಿಕ್ಕ ಚಿಕ್ಕ ಸರ್ಕೂಟ್‌ಗಳ ಬಗ್ಗೆ ಗಮನಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಭಟ್ಕಳ ಶಾಸಕ ಜೆ.ಡಿ.ನಾಯ್ಕ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.