ADVERTISEMENT

‘ಕರಿ ಇಶಾಡ್‌’ ಮಾವಿಗೆ ಹೆಚ್ಚಿದ ಬೇಡಿಕೆ

ಮಾವಿನ ದರ ಇಳಿಕೆ; ಮಾವಿನ ಹಣ್ಣುಗಳ ವ್ಯಾಪಾರ ಚುರುಕು

​ಪ್ರಜಾವಾಣಿ ವಾರ್ತೆ
Published 28 ಮೇ 2018, 12:41 IST
Last Updated 28 ಮೇ 2018, 12:41 IST
ಕಾರವಾರದ ಶಿವಾಜಿ ವೃತ್ತದಲ್ಲಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳು
ಕಾರವಾರದ ಶಿವಾಜಿ ವೃತ್ತದಲ್ಲಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳು   

ಅಂಕೋಲಾ: ಪಟ್ಟಣದ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಖರೀದಿ ಜೋರಾಗಿ ನಡೆದಿದೆ. ಅದರಲ್ಲೂ ಇಲ್ಲಿನ ವಿಶೇಷ ತಳಿ ‘ಕರಿ ಇಶಾಡ್‌’ನ ದರದಲ್ಲಿ ಇಳಿಕೆ ಕಂಡಿರುವುದು ವ್ಯಾಪಾರ ಚುರುಕುಗೊಳ್ಳಲು ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಅಪೂಸ್‌, ಅಲ್ಫಾನ್ಸೊ, ಮಲ್ಲಿಕಾ ಸೇರಿ, ವಿವಿಧ ತಳಿಯ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಆರಂಭದಲ್ಲಿ ಒಂದು ಡಜನ್‌ಗೆ ₹400 ರಿಂದ ₹500ರವರೆಗೆ ಇದ್ದ ಮಾವಿನ ಹಣ್ಣಿನ ದರ ಇದೀಗ ₹100ರಿಂದ ₹150ಕ್ಕೆ ಇಳಿದಿದೆ. ಅದರಲ್ಲೂ ಕರಿ ಇಶಾಡ್‌ಗೆ ಇದೀಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್ ರಜಾಕ್.

ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಾದ ಪೂಜಗೇರಿ, ಹೊಸಗದ್ದೆ, ಶಿರೂರು, ಬಾಸಗೊಡ, ಬೆಳಂಬಾರ ಮುಂತಾದ ಕಡೆಗಳಿಂದ ಹಣ್ಣುಗಳು ಇಲ್ಲಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಘಮಲು ರಸ್ತೆಯಲ್ಲಿ ಸಂಚರಿಸುವ ಜನರ ಮೂಗಿಗೆ ಬಡಿಯುತ್ತಿದೆ. ಹಣ್ಣಿನ ಪರಿಮಳಕ್ಕೆ ಮಾರು ಹೋದವರು ಮಾರಾಟ ಸ್ಥಳದತ್ತ ಸುಳಿಯುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

ನೈಸರ್ಗಿಕವಾಗಿ ಮಾಗಿಸುವ ವಿಧಾನ:

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಬೇಡಿಕೆ ಹೊಂದಿರುವ ಕರಿ ಇಶಾಡ್, ಸುವಾಸನೆ ಭರಿತ ಹಾಗೂ ವಿಶೇಷ ರುಚಿಯನ್ನು ಹೊಂದಿದೆ. ಇಲ್ಲಿನ ಹಾಲಕ್ಕಿ ಸಮುದಾಯ ಮರಗಳಿಂದ ಕಾಯಿಗಳನ್ನು ತೆಗೆದು, ನೈಸರ್ಗಿಕವಾಗಿ ಮಾಗಿಸುವ ವಿಧಾನವನ್ನು ಪಾಲನೆ ಮಾಡುತ್ತಾರೆ.

ಹುಲ್ಲುಗಳಲ್ಲಿ ಕಾಯಿಗಳನ್ನು ಇಟ್ಟು, ಅವುಗಳು ಹಣ್ಣಾದ ಬಳಿಕ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತದೆ. ಇಲ್ಲಿ ಯಾವುದೇ ರಾಸಾಯನಿಕವನ್ನು ಅವರು ಬಳಕೆ ಮಾಡುವುದಿಲ್ಲ. ಹೀಗಾಗಿ ಈ ಹಣ್ಣಿಗೆ ಇಲ್ಲಿ ಬೇಡಿಕೆ ಹೆಚ್ಚು. ಎರಡು ವರ್ಷಗಳವರೆಗೆ ಶೇಖರಿಸಿಡಲು ಬರುವ ಮಾವಿನ ‘ಪಲ್ಪ್‌’ ಅನ್ನು ಸಮೀಪದ ಹಿಚ್ಕಡ ತಯಾರಿಕಾ ಘಟಕದಲ್ಲಿ ತಯಾರಿಸಲಾಗುತ್ತದೆ. ಇದು ಕೂಡ ವಿವಿಧೆಡೆ ರಫ್ತಾಗುತ್ತದೆ ಎಂದು ವ್ಯಾಪಾರಿ ಈರಣ್ಣ ಅವರು ಹೇಳುತ್ತಾರೆ.

‘ಮಳೆಗಾಲ ಪ್ರಾರಂಭವಾದ ಮೇಲೆ ಮಾವಿನ ವ್ಯಾಪಾರ ಅಷಕಷ್ಟೆ. ಇನ್ನು ಹೆಚ್ಚೆಂದರೆ 20 ದಿನಗಳು ಮಾತ್ರ ವ್ಯಾಪಾರ ನಡೆಯುತ್ತದೆ’ ಎಂದು ವ್ಯಾಪಾರಗಳು ಅಭಿಪ್ರಾಯಪಡುತ್ತಾರೆ.

– ಮಂಜುನಾಥ ಇಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.