ADVERTISEMENT

ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 8:50 IST
Last Updated 16 ಅಕ್ಟೋಬರ್ 2012, 8:50 IST
ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ
ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ   

ಸಿದ್ದಾಪುರ: `ತಾಲ್ಲೂಕಿನಲ್ಲಿ ಸಣ್ಣ-ಪುಟ್ಟ ಅಪರಾಧಗಳನ್ನು ಬಿಟ್ಟರೇ  ಸಂಘಟಿತ ಅಪರಾಧಗಳು ಅಷ್ಟಾಗಿ ಕಂಡುಬಂದಿಲ್ಲ. ಆದ್ದರಿಂದ  ಕಾನೂನು, ಸುವ್ಯವಸ್ಥೆ  ಸಮಸ್ಯೆಯಾಗಿ ಕಾಣಿಸಿಲ್ಲ~ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಕೆ.ಟಿ.ಬಾಲಕೃಷ್ಣ ಹೇಳಿದರು.

ಸ್ಥಳೀಯ ಪೊಲೀಸ್ ಠಾಣೆಗೆ ಸೋಮವಾರ  ಭೇಟಿ  ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಜಗಳಗಳು  ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತಿದ್ದು, ಆ ಸಂಬಂಧ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ. ಈ ವಿಧದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದರು.

ಇಲ್ಲಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಮತ್ತು ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ತಾಲ್ಲೂಕಿನ ಪ್ರಮುಖ ಸಮಸ್ಯೆ ಅಪಘಾತ ಪ್ರಕರಣಗಳದ್ದಾಗಿದೆ. ಜೋಗ ಜಲಪಾತ ನೋಡಲು ಹೆಚ್ಚಿನ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ತಾಲ್ಲೂಕಿನ ಹೆದ್ದಾರಿಯಲ್ಲಿ ಈಚೆಗೆ ಸಂಭವಿಸಿದ್ದ ಅಪಘಾತದಲ್ಲಿ ಐದು ಜನರು  ಮೃತಪಟ್ಟಿದ್ದ ಸ್ಥಳದ ಬಗ್ಗೆಯೂ ರಾಷ್ಟ್ರೀಯ  ಹೆದ್ದಾರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಪಘಾತ ನಡೆದ ಸ್ಥಳವನ್ನು ಸರಿಪಡಿಸಲು ಅವರಿಗೆ ಹೇಳಲಾಗಿದೆ ಎಂದರು.

ಡಿವೈಎಸ್‌ಪಿ ಎನ್.ಡಿ.ಬಿರ್ಜೆ, ಪಿಐ ವೀರೇಂದ್ರಕುಮಾರ, ಪಿಎಸ್‌ಐ ದಿನೇಶಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.