ಕಾರವಾರ: ಕರಾವಳಿ ತೀರದಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವ ಸಲುವಾಗಿ ಕರಾವಳಿ ಕಾವಲು ಪಡೆಗೆ ಸೇರ್ಪಡೆಗೊಂಡಿರುವ ಹೋವರ್ ಕ್ರಾಫ್ಟ್ (ಏರ್ ಕುಶನ್ ವೆಹಿಕಲ್) ಮಂಗಳವಾರ ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲ ತೀರಕ್ಕೆ ಬಂದಿದೆ.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕರಾವಳಿ ತೀರದುದ್ದಕ್ಕೂ ರಕ್ಷಣಾ ಕ್ರಮಗಳನ್ನು ತೀವ್ರಗೊಳಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಕರ್ನಾಟಕ ಕರಾವಳಿ ಕಾವಲು ಪಡೆಗೆ ಈ ಹೋವರ್ ಕ್ರಾಫ್ಟ್ ಒದಗಿಸಲಾಗಿದೆ.
‘ಈ ವಾಹನ ಸಮುದ್ರದಲ್ಲಿ ಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸಮುದ್ರ ದಂಡೆಯಲ್ಲಿ ಹಾಗೂ ನೆಲತಟ್ಟಾದ ಪ್ರದೇಶದಲ್ಲಿ ಸಹ ಚಲಿಸುವ ಸಾಮರ್ಥ್ಯ ಹೊಂದಿದೆ. ನೀರಿನ ಮೇಲಿನ ವೇಗಕ್ಕಿಂತ ನೆಲದ ಮೇಲೆ ಹೆಚ್ಚು ವೇಗದಲ್ಲಿ ಚಲಿಸುವ ಶಕ್ತಿ ಇದಕ್ಕಿದೆ’ ಎಂದು ಕರಾವಳಿ ಕಾವಲು ಪಡೆಯ ಕಮಾಂಡೆಂಟ್ ಜಿ.ಎಸ್. ರಾಲ್ಹಿ ವಿವರಿಸಿದರು.
‘ಸಮುದ್ರದಲ್ಲಿ ಯಾವುದಾದರೂ ದೋಣಿಯನ್ನು ಬೆನ್ನಟ್ಟಿ ಹಿಡಿಯಲು ಹಾಗೂ ಕಡಿಮೆ ನೀರು ಇರುವ ಕಡೆಗಳಲ್ಲೂ ಇದನ್ನು ಬಳಸಬಹುದಾಗಿದೆ. ಸಮಾಜಘಾತುಕ ವ್ಯಕ್ತಿಗಳು ಸಮುದ್ರದಿಂದ ಹೊರಬಂದು ಓಡತೊಡಗಿದರೆ ಅಲ್ಲೂ ಈ ವಾಹನದಿಂದ ಹಿಂಬಾಲಿಸಬಹು ದಾಗಿದೆ’ ಎಂದು ಅವರು ಹೇಳಿದರು.
‘ಈ ಹೋವರ್ ಕ್ರಾಫ್ಟ್ ಮುಂಬೈನಿಂದ ಬಂದಿದ್ದು, ಮೂರು ದಿನ ಇಲ್ಲಿಯೇ ಇರುತ್ತದೆ. ಬಳಿಕ ಮಂಗಳೂರಿಗೆ ಹೋಗಿ ಮತ್ತೆ ಮುಂಬೈಗೆ ಹಿಂತಿರುಗಲಿದೆ. ಈ ವಾಹನದ ಮೌಲ್ಯ ಸುಮಾರು ₨ 36 ಕೋಟಿ. ಇದರಲ್ಲಿ ಜಿಪಿಎಸ್ ಸೇರಿದಂತೆ ಮತ್ತಿತರ ಆಧುನಿಕ ಸೌಲಭ್ಯಗಳಿವೆ. ಇಬ್ಬರು ಅಧಿಕಾರಿಗಳು ಹಾಗೂ 10 ಸಿಬ್ಬಂದಿ ಈ ವಾಹನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಹೋವರ್ ಕ್ರಾಫ್ಟ್‌ನ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಸಂದೀಪ್ ಸಫಾಯ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.