ADVERTISEMENT

ಕುಡಿಯುವ ನೀರಿಗಾಗಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 7:55 IST
Last Updated 10 ಏಪ್ರಿಲ್ 2012, 7:55 IST

ಶಿರಸಿ: ತಾಲ್ಲೂಕಿನ ಕುಡಿಯುವ ನೀರಿನ ಅಭಾವ ಪರಿಹರಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಬೇಡಿಕೆಪತ್ರ ನೀಡಿದರು. ರಾಜ್ಯದ ಬಹಳಷ್ಟು ತಾಲ್ಲೂಕುಗಳಲ್ಲಿ ಬರಗಾಲದ ಭೀಕರತೆ ಎದುರಾಗಿದ್ದು, ಇದಕ್ಕೆ ಶಿರಸಿಯೂ ಹೊರತಾಗಿಲ್ಲ. ಅಂತರ್ಜಲ ಮಟ್ಟ ಕುಸಿತ ಉಂಟಾಗಿದ್ದು ಕೆರೆ, ಬಾವಿ, ಹಳ್ಳಗಳು ಬತ್ತಿಹೋಗುವ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.
 
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶ ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಬೇಕು. ಈ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕು.

ತಾಲ್ಲೂಕಿನ ಹಲವು ಕಡೆ ನಡೆಯುತ್ತಿದ್ದ ಕಲ್ಲು ಜಲ್ಲಿ ಕ್ವಾರಿಗಳು ಸ್ಥಗಿತಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಅಭಿವೃದ್ಧಿ ಕಾಮಗಾರಿಗಳಿಗೆ ಕಚ್ಚಾವಸ್ತು ಸಿಗದೆ ತೊಂದರೆಯಾಗುತ್ತಿದೆ. ಬಡವರಿಗೆ ವಿತರಿಸುವ ಪಡಿತರ ಚೀಟಿ ವ್ಯವಸ್ಥೆ ಸರಿಯಾಗಿ ಆಗುತ್ತಿಲ್ಲ.
 
ಸರ್ಕಾರ ಈ ಬಗ್ಗೆ ಶೀಘ್ರ ಪರಿಹಾರ ನೀಡದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಬೇಡಿಕೆಪತ್ರದಲ್ಲಿ ತಿಳಿಸಲಾಗಿದೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಾಂತಾರಾಮ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಬಾಶಿ, ಜಿ.ಎನ್.ಹೆಗಡೆ ಮುರೇಗಾರ, ರಾಚಪ್ಪ ಜೋಗಳೇಕರ, ದೀಪಕ ದೊಡ್ಡೂರ, ಗೀತಾ ಭೋವಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.