ADVERTISEMENT

ಕೃಷಿ ಉತ್ಸವ, ಕುಮಟಾ ಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:15 IST
Last Updated 17 ಫೆಬ್ರುವರಿ 2011, 10:15 IST

ಕುಮಟಾ:  ಜಿಲ್ಲಾಮಟ್ಟದ ಕೃಷಿ ಮೇಳ ಮೇಳೈಸಿಕೊಂಡು ನಡೆಯುತ್ತಿರುವ ‘ಕುಮಟಾ ಹಬ್ಬ’ ವಿಶಿಷ್ಟ ಹಾಗೂ ಮೆಚ್ಚುಗಾರ್ಹ ಕಾರ್ಯಕ್ರಮವಾಗಿದೆ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬುಧವಾರ ಇಲ್ಲಿಯ ಮಹಾತ್ಮಾಗಾಂಧಿ ಮೈದಾನದಲ್ಲಿ ನಡೆದ ‘ಕುಮಟಾ ಹಬ್ಬ’ ಉದ್ಘಾಟಿಸಿದ ಅವರು, ನಮ್ಮ ಕಲೆ, ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಕುಮಟಾ ಹಬ್ಬ ಹೊರ ಜಿಲ್ಲೆ, ಹೊರ ರಾಜ್ಯಗಳ ಗಮನ ಸೆಳೆಯುತ್ತಿರುವುದು ಇಲ್ಲಿಯ ವೈಶಿಷ್ಟತೆಯ ಸಂಕೇತ. ಮುಂದೆ ಕುಮಟಾದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಸ್ವಾಗತಿಸಿದ ಯುವ ಸಂಯುಕ್ತ ಸಂಘದ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಕುಮಟಾ ಹಬ್ಬ ಕಳೆದ ಕೆಲ ವರ್ಷಗಳಿಂದ ಈ ಭಾಗದ ಅನಿವಾರ್ಯ ಆಚರಣೆಯಂತಾಗಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಕುಮಟಾ ಹಬ್ಬ ಸಮಿತಿ ಅಧ್ಯಕ್ಷ ಹಾಗೂ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕುಮಟಾ ಸುತ್ತಲಿನ ಸಂಸ್ಕೃತಿಯ ಹಬ್ಬವಾಗಿ ಈ ಆಚರಣೆ ಮಹತ್ವ ಪಡೆದುಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಸಚಿವ ಕಾಗೇರಿ ಕೃಷಿ ಕೈಪಿಡಿ ಬಿಡುಗಡೆಗೊಳಿಸಿದರು. ಕುಮಟಾದವರೇ ಆದ  ನಿವೃತ್ತ ಐಜಿಪಿ ಜಯಪ್ರಕಾಶ ನಾಯಕ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ವಿನೋದ ಪ್ರಭು, ಕೃಷಿ ವಿ.ವಿ. ಉಪಕುಲಪತಿ ಡಾ. ಆರ್.ಆರ್. ಹಂಚಿನಾಳ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಜಯಮೋಹನರಾಜ್, ಜಿಲ್ಲಾಧಿಕಾರಿ ಬಿ. ಎನ್. ಕೃಷ್ಣಯ್ಯ, ಶಾಸಕ ದಿನಕರ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಎಲ್. ವಿ. ಶಾನಭಾಗ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಿವೇಕ ಜಾಲಿಸತ್ಗಿ,  ಪುರಸಭೆ ಅಧ್ಯಕ್ಷೆ ಇಂದಿರಾ ವೈದ್ಯ, ಜಿಪಂ ಸದಸ್ಯರಾದ ವೀಣಾ ಸೂರಜ್ ನಾಯ್ಕ, ಲಲಿತಾ ಪಟಗಾರ, ತಾ.ಪಂ. ಸದಸ್ಯ ಈಶ್ವರ ನಾಯ್ಕ, ನಿವೃತ್ತ ಐ.ಜಿ.ಪಿ. ಜಯಪ್ರಕಾಶ ನಾಯಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಡದ್,  ಉಪನಿರ್ದೇಶಕ ಕಿರಣಕುಮಾರ ನಾಯ್ಕ ಮತ್ತಿತರರು ಇದ್ದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.