ADVERTISEMENT

ಕೃಷಿ ಕೆಲಸ ಸುಗಮಗೊಳಿಸಿದ ಯಂತ್ರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:11 IST
Last Updated 12 ಡಿಸೆಂಬರ್ 2012, 9:11 IST

ಶಿರಸಿ: ಕೃಷಿ ಕೂಲಿಕಾರ್ಮಿಕರ ಕೊರತೆ ಎದುರಿಸುತ್ತಿರುವ ಗ್ರಾಮೀಣ ಜನರಿಗೆ ಆಧುನಿಕ ಯಂತ್ರಗಳು ಆತ್ಮವಿಶ್ವಾಸ ತುಂಬುತ್ತಿವೆ.
ಇದು ಬತ್ತದ ಕೊಯ್ಲಿನ ಹಂಗಾಮು. ಕೊಯ್ಲು ಮುಗಿಯುತ್ತಿದ್ದಂತೆ ಬತ್ತ ಮತ್ತು ಹುಲ್ಲನ್ನು ಬೇರ್ಪಡಿಸುವ ಪ್ರಕ್ರಿಯೆ ಮಾಡಬೇಕು.

ಕೊಯ್ಲಿಗೆ ಬಂದ ಕೂಲಿಗಳು ಮತ್ತೊಂದು ಗದ್ದೆ ಕೊಯ್ಲಿಗೆ ಹೋದರೆ ಮತ್ತದೇ ಕೆಲಸಗಾರರನ್ನು ಹುಡುಕುವ ಕೆಲಸ ಯಜಮಾನನಿಗೆ. ಕೃಷಿಕರಿಗೆ ಎದುರಾಗಿರುವ ಇಂತಹ ಸಮಸ್ಯೆ ಪರಿಹಾರಕ್ಕೆ ಬತ್ತ ಒಕ್ಕುವ ಯಂತ್ರ ನೆರವಾಗುತ್ತಿದೆ.

ಒಂದು ಎಕರೆ ಬತ್ತದ ಗದ್ದೆಯಲ್ಲಿ ಕಟಾವು ನಡೆದ ನಂತರ ಬತ್ತ ಒಕ್ಕುವ, ತೂರುವ ಕೆಲಸ ಮಾಡಲು ಕನಿಷ್ಠವೆಂದರೂ 20-25 ಕೆಲಸಗಾರರು ಬೇಕು. ಬತ್ತ ಸೆಳೆಯಲು (ಬಡಿಯಲು) ಕಣ ಸಿದ್ಧಪಡಿಸಿಕೊಂಡು ಕೆಲಸಗಾರರು ಸಿಕ್ಕಾಗ ಅದನ್ನು ಒಕ್ಕಬೇಕು.

ನಂತರವೇ ಬತ್ತದ ಹುಲ್ಲನ್ನು ಜಾನುವಾರುಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಬಂದಿರುವ ಬತ್ತ ಒಕ್ಕುವ ಯಂತ್ರ ಒಂದು ತಾಸಿನಲ್ಲಿ ಒಂದು ಎಕರೆ ಪ್ರದೇಶದ ಬತ್ತ ಸೆಳೆದು, ಬತ್ತ ಹಾಗೂ ಹುಲ್ಲನ್ನು ಬೇರ್ಪಡಿಸುತ್ತದೆ. ಇದಕ್ಕೆ ಆರು ಕೆಲಸಗಾರರು ಸಾಕು. ಸಾಂಪ್ರದಾಯಿಕ ಮಾದರಿಯಲ್ಲಿ ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ರೂ 5ಸಾವಿರ ಖರ್ಚಾದರೆ ಯಂತ್ರದ ಮೂಲಕ ಒಂದು ತಾಸಿಗೆ ರೂ 400 ಬಾಡಿಗೆ ಮೊತ್ತ ಸೇರಿದರೂ ಸಾಂಪ್ರದಾಯಿಕ ಪದ್ಧತಿಯ ಅರ್ಧದಷ್ಟು ಮಾತ್ರ ಖರ್ಚಾಗುತ್ತದೆ.

ತಾಲ್ಲೂಕಿನ ಯಡಳ್ಳಿ ಸೊಸೈಟಿ ಹಿಂದಿನ ವರ್ಷ ಕೃಷಿ ಇಲಾಖೆ ನೀಡಿದ ರೂ 50ಸಾವಿರ ಸಹಾಯಧನದೊಂದಿಗೆ ರೂ 1ಲಕ್ಷ ಬಂಡವಾಳ ತೊಡಗಿಸಿ ಈ ಯಂತ್ರ ಖರೀದಿಸಿದೆ. ಸುತ್ತಲಿನ ರೈತರು ಈ ಯಂತ್ರದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಬಹುತೇಕ ಸಣ್ಣ ಹಿಡುವಳಿದಾರರೇ ಹೆಚ್ಚಿರುವ ಈ ಭಾಗದಲ್ಲಿ ಈ ಯಂತ್ರ ಕೃಷಿಕರಿಗೆ ಕೃಷಿ ಚಟುವಟಿಕೆ ನಡೆಸಲು ತುಸು ನಿರಾಳವಾಗಿದೆ. ಸಣ್ಣ ಹಿಡುವಳಿದಾರರಿಗೆ ಈ ಯಂತ್ರ ವೆಚ್ಚದಾಯಕವಾಗುತ್ತದೆ ಹೀಗಾಗಿ ಸ್ಥಳೀಯ ಸೊಸೈಟಿ ಮೂಲಕ ಬಾಡಿಗೆಗೆ ಯಂತ್ರ ದೊರೆತರೆ ಬಳಕೆಗೆ ಅನುಕೂಲವಾಗುತ್ತದೆ. ಪ್ರಸ್ತುತ ಯಂತ್ರಕ್ಕೆ ಭಾರೀ ಬೇಡಿಕೆ ಬಂದಿದ್ದು, 15 ದಿನ ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದು ಸೊಸೈಟಿಯ ಪ್ರಮುಖರು ಹೇಳುತ್ತಾರೆ.

ತಾಲ್ಲೂಕಿನ ಭೈರುಂಬೆ ಸೊಸೈಟಿಯ ಯಂತ್ರ ಹಾಗೂ ಇನ್ನಿತರ ಮೂರ್ನಾಲ್ಕು ಖಾಸಗಿ ಯಂತ್ರಗಳು ಪ್ರಸ್ತುತ ಕೆಲಸ ನಿರ್ವಹಿಸುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.