ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ

ಸೀಬರ್ಡ್‌ ನಿರಾಶ್ರಿತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:24 IST
Last Updated 24 ಸೆಪ್ಟೆಂಬರ್ 2013, 6:24 IST

ಕಾರವಾರ: ‘ಸೀಬರ್ಡ್‌ ನೌಕಾನೆಲೆ ಯೋಜನೆ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ಹಣ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಕಾರವಾರ–ಅಂಕೋಲಾ ಸೀಬರ್ಡ್‌ ನೌಕಾನೆಲೆ ನಿರಾಶ್ರಿತರ ಒಕ್ಕೂಟ ಅಧ್ಯಕ್ಷ ಜಿ.ವಿ. ನಾಯ್ಕ ಎಚ್ಚರಿಸಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೀಬರ್ಡ್‌ ಯೋಜನೆಯ ನಿರಾಶ್ರಿತರಿಗೆ ಪರಿಹಾರ ಹಣ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿ ಸುಮಾರು ಒಂದು ವರ್ಷವಾಗಿದೆ ಹಾಗೂ ರಕ್ಷಣಾ ಇಲಾಖೆ ಸಲ್ಲಿಸಿದ ಪುನರ್‌ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್‌ ತಿರಸ್ಕರಿಸಿ, ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದೆ. ಆದರೆ, ಇದುವರೆವಿಗೂ ಪರಿಹಾರ ಹಣ ಮಾತ್ರ ಬಿಡುಗಡೆ ಯಾಗಿಲ್ಲ’ ಎಂದು ದೂರಿದರು.

‘ಈ ಒಂದು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ನಿರಾಶ್ರಿತರು ಸಾವನ್ನ ಪ್ಪಿದ್ದಾರೆ. ಪರಿಹಾರ ಹಣ ನೀಡುವುದು ಹೀಗೆ ತಡವಾದರೆ  ನಿರಾಶ್ರಿತರೇ ಬದುಕಿರುವುದಿಲ್ಲ’ ಎಂದರು.

‘ಹಿಂದೆ ನವದೆಹಲಿಗೆ ಈ ಕ್ಷೇತ್ರದ ಶಾಸಕ ಸತೀಶ ಸೈಲ್‌ ನೇತೃತ್ವದಲ್ಲಿ ನಿರಾಶ್ರಿತರ ನಿಯೋಗ ತೆರಳಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಲಾಗಿತ್ತು. ಆಗ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಸುಪ್ರೀಂಕೋರ್ಟ್‌ ಆದೇಶ ಬಂದ ನಂತರ ಹಣ ಬಿಡುಗಡೆ ಮಾಡುವು ದಾಗಿ ತಿಳಿಸಿದ್ದರು. ಆದರೆ, ಸುಪ್ರೀಂಕೋರ್ಟ್‌ ಆದೇಶ ಹೊರಬಿದ್ದರೂ ಯಾವುದೇ ಹಣ ಬಿಡುಗಡೆಯಾಗಿಲ್ಲ’ ಎಂದು ತಿಳಿಸಿದರು.

ರಾಜಕೀಯ ದ್ವೇಷ: ‘ಪರಿಹಾರ ಹಣ ಬಿಡುಗಡೆಗಾಗಿ ಒತ್ತಾಯಿಸಿ ಕಳೆದ ವರ್ಷ ಇಲ್ಲಿನ ನೌಕಾನೆಲೆಯ ಮುಖ್ಯದ್ವಾರದ ಎದುರು ನಿರಾಶ್ರಿತರು ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದ್ದರು. ಸತೀಶ ಸೈಲ್‌ ಜೊತೆ ಗುರುತಿಸಿಕೊಂಡಿದ್ದ 11ಮಂದಿ ಪ್ರತಿಭಟನಾಕಾರರ ಮೇಲೆ ಪ್ರತಿಭಟನೆ ನಡೆದ ಎರಡು ದಿನಗಳ ನಂತರ ಪ್ರಕರಣ ದಾಖಲಿಸಲಾಯಿತು. ಆಗಿನ ಶಾಸಕರಾಗಿದ್ದ ಆನಂದ ಅಸ್ನೋಟಿಕರ್‌ ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಮೇಲೆ ಒತ್ತಡ ಹೇರಿದ್ದರು. ಈಗ 11 ಮಂದಿಗೂ ಸಮನ್ಸ್‌ ಜಾರಿಯಾಗಿದೆ’ ಎಂದರು. 

ಸೈಲ್‌ ಬಿಡುಗಡೆ ಭರವಸೆ: ‘ನಿರಾಶ್ರಿತರ
ಕಷ್ಟ ಸುಖಗಳಲ್ಲಿ ಶಾಸಕ ಸತೀಶ ಸೈಲ್‌ ಭಾಗಿಯಾಗಿದ್ದಾರೆ. ನಿರಾಶ್ರಿತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಮ್ಮ ಪರವಾಗಿ ಕಾನೂನಾತ್ಮಕವಾಗಿ ಹೋರಾಡಿದ್ದಾರೆ. ರಾಜಕೀಯ ಪಕ್ಷಗಳು ನಮ್ಮನ್ನು ನಡುನೀರಿನಲ್ಲಿ ಕೈಬಿಟ್ಟಾಗ ದಡ ಸೇರಿಸಿದವರು ಅವರು. ಆ ಕಾರಣಕ್ಕಾಗಿಯೇ ನಿರಾಶ್ರಿತರು ಸದಾ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಸಿಬಿಐ ಬಂಧನದಿಂದ ಮುಕ್ತರಾ ಗುತ್ತಾರೆ ಎನ್ನುವ ಭರವಸೆ ಇದೆ’ ಎಂದರು. ಒಕ್ಕೂಟದ ಕಾರ್ಯದರ್ಶಿ ಸುಭಾಷ್‌ ನಾಯ್ಕ,  ಆರ್‌.ವಿ. ನಾಯ್ಕ, ಎನ್‌.ವಿ. ನಾಯಕ, ಸುಕ್ರು ಗೌಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.