ADVERTISEMENT

ಕೌಶಲ ಹೆಚ್ಚಿಸುವ ಶಿಕ್ಷಣಕ್ಕೆ ಆದ್ಯತೆ - ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:50 IST
Last Updated 1 ಜೂನ್ 2011, 6:50 IST

ಕಾರವಾರ: ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲಗಳನ್ನು ಹೆಚ್ಚಿಸಿ ಉದ್ಯೋಗ ನೀಡುವ ಕೈಗಾರಿಗಳನ್ನು ಗುರುತಿಸಬೇಕಾಗಿದೆ ಎನ್ನುವ ಸಲಹೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ನವದೆಹಲಿಯಲ್ಲಿ ಸೋಮವಾರ ನಡೆದ 12 ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ನೀಡಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ `ರಾಷ್ಟ್ರೀಯ ವೃತ್ತಿಶಿಕ್ಷಣ ನಿರ್ವಹಣ ಚೌಕಟ್ಟು ಅನುಷ್ಠಾನ ಗೊಳಿಸಲು ರಚಿಸಲಾಗಿರುವ ರಾಷ್ಟ್ರೀಯ ಮಟ್ಟದ 12 ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಭಾಗವಹಿಸಿದ ಅವರು, ಕೌಶಲ ತರಬೇತಿ ನೀಡುತ್ತಿರುವ ಸ್ವಯಂ ಸೇವಾಸಂಸ್ಥೆಗಳಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದರು.

ದೇಶದಲ್ಲಿ ಮಾದರಿ ಶಿಕ್ಷಣ ಕಾರ್ಯಕ್ರಮಗಳನ್ನು ಹರಿಯಾಣ ರಾಜ್ಯದಲ್ಲಿ ಮಾತ್ರ ಅನುಷ್ಠಾನಗೊಳಿಸ ಲಾಗಿದೆ. ಈ ಕಾರ್ಯಕ್ರಮಗಳು ದೇಶದ ಇನ್ನುಳಿದ ರಾಜ್ಯಗಳಲ್ಲೂ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆಗ್ರಹಿಸಿದರು.

ವೃತ್ತಿ ಶಿಕ್ಷಣ ನೀಡುವ ಶಿಕ್ಷಕರಿಗೆ ಸಮರ್ಪಕ ತರಬೇತಿ ನೀಡುವ ಕಾರ್ಯಗಳಿಗೆ ಒತ್ತು ನೀಡಬೇಕು. ವೃತ್ತಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಜಾರಿಗೊಳಿಸಲು ಅಗತ್ಯವಾದ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದರು.

ವೃತ್ತಿ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಸ್ಪಷ್ಟತೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕು. ವೃತ್ತಿ ಶಿಕ್ಷಣ ಚೌಕಟನ್ನು ಅಂತಿಮಗೊಳಿಸುವ ಮುನ್ನ ವಿಷಯತಜ್ಞರೊಂದಿಗೆ ಕೂಲಕಂಷವಾಗಿ ಚರ್ಚೆ ನಡೆಸಬೇಕು ಎಂದು ಕಾಗೇರಿ ಒತ್ತಾಯಿಸಿದರು.

ಮಾನವ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನ್ಷುವೈಶ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಮಿಜೋರಾಂ ರಾಜ್ಯಗಳ ಶಿಕ್ಷಣ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.