ADVERTISEMENT

ಚತುಷ್ಪಥಕ್ಕೆ ಮಯೂರ ವರ್ಮ ವೇದಿಕೆ ಬಲಿ

ಪಿ.ಕೆ.ರವಿಕುಮಾರ
Published 9 ಜೂನ್ 2017, 8:15 IST
Last Updated 9 ಜೂನ್ 2017, 8:15 IST
ಚತುಷ್ಪಥ ಕಾಮಗಾರಿಗೆ ತೆರವುಗೊಳ್ಳಲಿರುವ ಕಾರವಾರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಮಯೂರ ವರ್ಮ ವೇದಿಕೆ
ಚತುಷ್ಪಥ ಕಾಮಗಾರಿಗೆ ತೆರವುಗೊಳ್ಳಲಿರುವ ಕಾರವಾರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಮಯೂರ ವರ್ಮ ವೇದಿಕೆ   

ಕಾರವಾರ: ಜಿಲ್ಲೆಯಲ್ಲಿ ಭರದಿಂದ ಸಾಗಿರುವ ಚತುಷ್ಪಥ ಕಾಮಗಾರಿಗೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಮಯೂರ ವರ್ಮ ವೇದಿಕೆ ತೆರವುಗೊಳ್ಳಲಿದ್ದು, ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮಗಳಿಗೆ ಸಾಕ್ಷಿ ಯಾಗಿದ್ದ ಈ ವೇದಿಕೆ ಕಾರವಾರಿಗರಿಗೆ ಇನ್ನು ನೆನಪು ಮಾತ್ರ.

ಇದೊಂದು ಬೃಹತ್‌ ವೇದಿಕೆಯಾಗಿದ್ದು, ಇಲ್ಲಿ ನಡೆಯುತ್ತಿದ್ದ ಸಾಂಸ್ಕೃ ತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಸಾವಿರಾರು ಜನರಿಗೆ ರಸದೌತಣ ನೀಡುತ್ತಿತ್ತು. ಪಕ್ಕದಲ್ಲೇ ಕಡಲು ಇದ್ದು, ಸಂಜೆ ವೇಳೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ವೇದಿಕೆಯಲ್ಲಿನ ಮನ ರಂಜನಾ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ಆಯೋಜಿಸುತ್ತಿದ್ದ ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಇದೇ ವೇದಿಕೆಯಲ್ಲಿ ಜರುಗುತ್ತಿತ್ತು. ಅಲ್ಲದೇ ಸಂಘ ಸಂಸ್ಥೆಗಳು ನಡೆಸುವ ಉತ್ಸವ ಗಳಿಗೂ ಈ ವೇದಿಕೆ ಬಳಕೆಯಾಗುತ್ತಿತ್ತು. ಆದರೆ ಚತುಷ್ಪಥ ಕಾಮಗಾರಿಗೆ ವೇದಿ ಕೆಯ ಅರ್ಧ ಭಾಗ ತೆರವುಗೊಳ್ಳಲಿದೆ.

ADVERTISEMENT

ನವೀಕರಣಕ್ಕೆ ₹ 25 ಲಕ್ಷ ವೆಚ್ಚ: 2008ರಲ್ಲಿ ಈ ಮಯೂರ ವರ್ಮ ವೇದಿಕೆಯನ್ನು ₹ 15 ಲಕ್ಷ ವೆಚ್ಚದಲ್ಲಿ ಜಿಲ್ಲಾಡಳಿತ ವತಿಯಿಂದ ನವೀಕರಣ ಮಾಡಲಾಗಿತ್ತು. ಗಾಳಿ, ಮಳೆಗೆ ಹಾನಿಯಾಗದಂತೆ ಸುಸಜ್ಜಿತವಾದ ಚಾವಣಿಯನ್ನು ಅಳವಡಿಸಲಾಗಿತ್ತು. ವೇದಿಕೆಯ ಹಿಂಭಾಗದಲ್ಲಿ ಕಲಾವಿದರಿ ಗಾಗಿ ಮೀಸಲಾಗಿದ್ದ ಕೊಠಡಿಯು ಹಾನಿಗೊಂಡಿತ್ತು. ಆಗ ನಗರಸಭೆಯು ₹ 10 ಲಕ್ಷದ ವೆಚ್ಚದಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ನಡೆದಿತ್ತು.

‘ನಗರಭಾಗದಲ್ಲಿ ಹೆದ್ದಾರಿಯನ್ನು 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ. ಲಂಡನ್‌ ಸೇತುವೆಯಿಂದ ಆರ್‌ಟಿಒ ವರೆಗೆ ಸುಮಾರು 700 ಮೀಟರ್‌ ಉದ್ದ ಮೇಲ್ಸೇತುವೆ ನಿರ್ಮಾಣವಾಗಲಿದೆ. ಹೀಗಿರುವಾಗ ನಗರ ವ್ಯಾಪ್ತಿಯಲ್ಲಿ ವಿಸ್ತರಣೆಯನ್ನು ಕಡಿಮೆಗೊಳಿಸಬಹು ದಿತ್ತು. ಅಲ್ಲದೇ ಇದರಿಂದ ಮಯೂರ ವರ್ಮ ವೇದಿಕೆ ಕೂಡ ಉಳಿಯುತ್ತಿತ್ತು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಂದ್ರ.

ಐಆರ್‌ಬಿ ಕಂಪೆನಿಗೆ ಪತ್ರ: ‘ಚತುಷ್ಪಥ ಕಾಮಗಾರಿಯನ್ನು ಮುಂಬೈನ ಐಆರ್‌ಬಿ ಕಂಪೆನಿಯು ನಿರ್ವಹಿಸುತ್ತಿದೆ. ಕಾಮ ಗಾರಿಗೆ ತೆರವುಗೊಳ್ಳಲಿರುವ ಮಯೂರ ವರ್ಮ ವೇದಿಕೆಯನ್ನು ಅದರ ಪಕ್ಕದ ಲ್ಲಿಯೇ ಮರು ನಿರ್ಮಾಣ ಮಾಡುವಂತೆ ಕಂಪೆನಿಗೆ ಪತ್ರ ಬರೆದಿದ್ದೇವೆ. ಸ್ಥಳಾಂತರ ಮಾಡುವುದಕ್ಕೆ ₹ 25 ಲಕ್ಷವನ್ನು ಭರಿಸುತ್ತೇವೆ. ಅದನ್ನು ನೀವೆ ಮಾಡಿ ಎಂದು ಕೋರಿದ್ದಾರೆ. ಹೀಗಾಗಿ ಮಳೆ ಗಾಲದ ನಂತರ ಅದನ್ನು ಸ್ಥಳಾಂತರ ಮಾಡುತ್ತೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ತೆರವುಗೊಳ್ಳಲಿರುವ ಮಯೂರವರ್ಮ ವೇದಿಕೆಯನ್ನು ಅದರ ಪಕ್ಕದಲ್ಲಿಯೇ ಮರು ನಿರ್ಮಾಣ ಮಾಡಲಾಗುವುದು
ಎಚ್.ಪ್ರಸನ್
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.