ADVERTISEMENT

ಚುನಾವಣಾ ಸಮಾಚಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 7:08 IST
Last Updated 26 ಏಪ್ರಿಲ್ 2013, 7:08 IST

ಕೆಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಹಳಿಯಾಳ:
ಕರ್ನಾಟಕ ಜನತಾ ಪಕ್ಷದ ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಪಕ್ಷದ ಚುನಾವಣಾ ಕಾರ‌್ಯಾಲಯದಲ್ಲಿ ಬುಧವಾರ ಸಾಯಂಕಾಲ ಅಭ್ಯರ್ಥಿ ರವಿ ರೇಡ್ಕರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ` ಉದ್ಯೋಗ ಸೃಷ್ಟಿ, ಸಣ್ಣ ಕೈಗಾರಿಕೆ ಸ್ಥಾಪನೆ, ಶಿಕ್ಷಣಕ್ಕೆ ಸಹಾಯಧನ, ಅತಿಕ್ರಮಣ ಸಕ್ರಮ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ಕೃಷಿ ಆಧಾರಿತ ಉದ್ದಿಮೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು' ಎಂದರು.

`ಕಾಳಿನದಿ ನೀರಾವರಿ ಯೋಜನೆಯ ಬಗ್ಗೆ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಉಲ್ಲೆೀಖಿಸಲಾಗಿದ್ದು ಶಾಸಕನಾಗಿ ಆಯ್ಕೆಯಾದ ನಂತರ ಎರಡೂವರೆ ವರ್ಷದ ಅವಧಿಯೊಳಗೆ ನೀರಾವರಿ ಯೋಜನೆ ಮಂಜೂರಿ ಮಾಡಿಸುತ್ತೇನೆ. ಇಲ್ಲದಿದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ರೇಡ್ಕರ್ ಘೋಷಿಸಿದರು.

ಇದೇ 29 ರಂದು  ಸಂಜೆ 5 ಗಂಟೆಗೆ ಕೆಜೆಪಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ದಾಂಡೇಲಿಗೆ ಆಗಮಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.ಮಾತ್ರವಲ್ಲದೇ ಶಾಸಕರ ಸಂಚಾರಿ ಕಾರ‌್ಯಾಲಯ ಎಂಬ ಹೊಸ ಪರಿಕಲ್ಪನೆಯನ್ನು ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದೆ.ಪಕ್ಷದ ಪ್ರಮುಖರಾದ ಸಂದೀಪಕುಮಾರ ಬೋಬಾಟಿ, ಪ್ರಕಾಶ ಫಾಕ್ರೆ, ಜೀವಪ್ಪಾ ಭಂಡಾರಿ, ನಾರಾಯಣ ಘಾಡೆಕರ ಉಪಸ್ಥಿತರಿದ್ದರು.

ಪಕ್ಷಾಂತರಿಗಳಿಂದ ಬಿಜೆಪಿಗೆ ಹಾನಿಯಿಲ್ಲ: ನಾಯ್ಕ
ಭಟ್ಕಳ:
`ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಎರಡು ಸುತ್ತಿನ ಪ್ರಚಾರ ಕಾರ್ಯವನ್ನು ಈಗಾಗಲೇ ಮುಗಿಸಿದ್ದು, ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ನಿಟ್ಟನಲ್ಲಿ ನನ್ನ ಗೆಲುವು ನಿಶ್ಚಿತವಾಗಿದೆ' ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ನಾಯ್ಕ ಹೇಳಿದರು.

ಪಕ್ಷದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ' ಎಂದರು.
`ಏ. 26, 27ರಂದು ಸಂಸದ ಅನಂತಕುಮಾರ ಹೆಗಡೆ ಹಾಗೂ ಪಕ್ಷದ ಮುಖಂಡ ಭಾನುಪ್ರಕಾಶ ಪ್ರಚಾರಕ್ಕಾಗಿ ಭಟ್ಕಳಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರೀಯ ಮುಖಂಡರು ಆಗಮನದ ಬಗ್ಗೆ ಇನ್ನಷ್ಟೆ ದಿನಾಂಕ ನಿಗದಿಪಡಿಸಬೇಕಾಗಿದೆ' ಎಂದರು. ಪಕ್ಷದ ಕ್ಷೇತ್ರಾಧ್ಯಕ್ಷ ದಿನೇಶ ನಾಯ್ಕ, ಪ್ರಮುಖರಾದ ಎಂ.ವಿ. ಹೆಬಳೆ, ವಕೀಲರಾದ ರಾಜೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

ಡಾ.ಸಂಜು ನಾಯಕ ಮತಯಾಚನೆ
ಅಂಕೋಲಾ:
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಂಜು ನಾಯಕ ಅವರು ಮಾಜಿ ಸಚಿವ ಪ್ರಭಾಕರ ರಾಣೆ ಅವರ ನೇತೃತ್ವದಲ್ಲಿ ತಾಲ್ಲೂಕಿನ ಡೊಂಗ್ರಿ, ಹಳವಳ್ಳಿ, ಕಲ್ಲೆೀಶ್ವರ, ಕನಕನಹಳ್ಳಿ, ಅಗಸೂರು, ಅಡ್ಲೂರು ಭಾಗದಲ್ಲಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನರಸಿಂಹ ಭಾಗ್ವತ, ಶಂಕರ ಗೌಡ ಮುಂತಾದವರು ಉಪಸ್ಥಿತರಿದ್ದರು.

ಮನೆಮನೆಗೆ ತೆರಳಿ ಮತಯಾಚನೆ
ಸಿದ್ದಾಪುರ:
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ  ಹಾರ್ಸಿಕಟ್ಟಾದಲ್ಲಿ ಈಚೆಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪಿ.ಎಸ್.ಜೈವಂತ, ಮಾಜಿ ಶಾಸಕ ವಿವೇಕಾನಂದ ವೈದ್ಯ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ.ನಾಯ್ಕ ಕಡಕೇರಿ, ಪ್ರಮುಖರಾದ ಜಿ.ಎಸ್.ಹೆಗಡೆ, ಸಿ.ಆರ್.ಹೆಗಡೆ ಕವಲಕೊಪ್ಪ, ಎಸ್.ಎನ್.ಹೆಗಡೆ ಕಂಚಿಮನೆ, ಎಸ್.ಎಂ.ಪಾಟೀಲ್, ಸುಭಾಷ್ ಹೆಗಡೆ, ಜಿ.ಐ.ನಾಯ್ಕ, ಶ್ಯಾಮಲಾ ಗೌಡ ಮತ್ತಿತರರು ಉಪಸ್ಥಿತರಿದ್ದರು.

`ಕೈ' ಹಿಡಿದ ಬಿಜೆಪಿ ಮುಖಂಡ ಮಾದೇವ ನಾಯ್ಕ
ಭಟ್ಕಳ:
ಬಿಜೆಪಿ ಮುಖಂಡ ಬೆಟಕೂರ ಮಾದೇವ ನಾಯ್ಕ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು.ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದ ನಾಯ್ಕರು, ಬಿಜೆಪಿಗೆ ಸೇರ್ಪಡೆಯಾಗಿ, ಬೇಂಗ್ರೆ ತಾ.ಪಂ. ಕ್ಷೇತ್ರದಿಂದ ಗೆದ್ದು ತಾ.ಪಂ. ಉಪಾಧ್ಯಕ್ಷರಾಗಿದ್ದರು.

ಬಿಜೆಪಿ ಮುಖಂಡರು ತಮ್ಮನ್ನು ಎಲ್ಲ ಹಂತದಲ್ಲೂ ಕಡೆಗಣಿಸಿದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಅವರ ತಿಳಿಸಿದ್ದಾರೆ.

ಹಳಿಯಾಳಕ್ಕೆ ಕುಮಾರಸ್ವಾಮಿ ಇಂದು
ಹಳಿಯಾಳ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ 26 ರಂದು ಹಳಿಯಾಳಕ್ಕೆ ಆಗಮಿಸಲಿದ್ದು ಜೆಡಿಎಸ್ ಅಭ್ಯರ್ಥಿ ಶಾಸಕ ಸುನೀಲ್ ಹೆಗಡೆ ಅವರ ಪರವಾಗಿ ಸಾರ್ವಜನಿಕ ಸಮಾರಂಭದಲ್ಲಿ ಮತ ಯಾಚಿಸಲಿದ್ದಾರೆ.

ಸಂಜೆ 4 ಗಂಟೆಗೆ ಆನೆಗುಂದಿ ಮೈದಾನದಲ್ಲಿ ಏರ್ಪಡಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ನಂತರ ಕುಮಟಾಕ್ಕೆ ತೆರಳಿ ರಾತ್ರಿ 8 ಗಂಟೆಗೆ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ದಿನಕರ ಶೆಟ್ಟಿ ಪರವಾಗಿ ಮತಯಾಚಿಸಿ ಮಾತನಾಡಲಿದ್ದಾರೆ. ಮರುದಿನ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ಡಿ.ಅನಿಲ್‌ಕುಮಾರ್ ಪರವಾಗಿ ಬನವಾಸಿಯಲ್ಲಿ ಜೆಡಿಎಸ್ ಪಕ್ಷದ ಸಾರ್ವಜನಿಕ ಸಮಾರಂಭದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ವಿ.ಡಿ. ಹೆಗಡೆ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗೆ ಬೆಂಬಲ
ಭಟ್ಕಳ:
ಹೊನ್ನಾವರ ನಗರಬಸ್ತಿಕೇರಿ ತಾ.ಪಂ. ಕ್ಷೇತ್ರದ ಬಿಜೆಪಿ ಸದಸ್ಯೆ ಜಯಂತಿ ನಾಯ್ಕ ಪಕ್ಷೇತರ ಅಭ್ಯರ್ಥಿ ಮಾಂಕಾಳ ವೈದ್ಯರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಮುರ್ಡೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾ.ಪಂ.ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದ ನಾನು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಮಾಂಕಾಳ ವೈದ್ಯರನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

ಜೆಡಿಎಸ್‌ಗೆ ಸೇರ್ಪಡೆ
ಯಲ್ಲಾಪುರ:
ತಾಲ್ಲೂಕಿನ ಮರಗುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ. ಅನಿಲ್‌ಕುಮಾರ್ ಸಮ್ಮುಖದಲ್ಲಿ  ಪಕ್ಷಕ್ಕೆ ಸೇರಿದರು.

ನಂತರ ಮಾತನಾಡಿದ ಡಿ. ಅನಿಲ್‌ಕುಮಾರ `ಜೆಡಿಎಸ್ ಸಾಮಾನ್ಯ ಜನರ ಪಕ್ಷವಾಗಿದ್ದು ಇಲ್ಲಿ ಮೇಲು-ಕೀಳು ಎಂಬ ತಾರತಮ್ಯವಿಲ್ಲದ ಜನಪರ ಕಾರ್ಯ ಯೋಜನೆ ಹೊಂದಿರುವ ಪಕ್ಷ. ಎಲ್ಲ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ' ಎಂದರು. ಎಲ್ಲ ಜನರು ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದ ನಿರೀಕ್ಷೆಯಲ್ಲಿದ್ದು ಸ್ಪಷ್ಟ ಬಹುಮತದಿಂದ ಜೆಡಿಎಸ್ ಪಕ್ಷವನ್ನು ನಮ್ಮ ಕ್ಷೇತ್ರದಲ್ಲಿ ಆರಿಸಿ ತರಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.