ADVERTISEMENT

ಜನಜಾಗೃತಿ ಪಾದಯಾತ್ರೆಯ ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:18 IST
Last Updated 20 ಸೆಪ್ಟೆಂಬರ್ 2013, 8:18 IST

ಶಿರಸಿ:‘ಧ್ವನಿ ಇಲ್ಲದವರಿಗೆ ನ್ಯಾಯ ಕೊಡುವ ದಿಶೆಯಲ್ಲಿ ಹೋರಾಟ ಜಿಲ್ಲೆಯಲ್ಲಿ ಅವಶ್ಯವಿದೆ’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿವಾದಿ ಯಶವಂತ ಹೆರವಟ್ಟಾ ಹೇಳಿದರು.

ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಇದೇ 27ರಿಂದ 30ರವರೆಗೆ ಮುರ್ಡೇಶ್ವರ ದಿಂದ ಕಾರವಾರದ ವರೆಗೆ ಹಮ್ಮಿಕೊಂಡಿರುವ ಅರಣ್ಯ ಅತಿಕ್ರಮಣದಾರರ ಜನಜಾಗೃತಿ ಪಾದಯಾತ್ರೆಯ ಕರಪತ್ರವನ್ನು ಗುರುವಾರ ಇಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ನಾನು ವಿಧಾನಪರಿಷತ್ ಸದಸ್ಯನಾಗಿದ್ದಾಗ ಓರಿಸ್ಸಾಕ್ಕೆ ಅಧ್ಯಯನ ಪ್ರವಾಸ ನಡೆಸಿದ್ದರು. ಓರಿಸ್ಸಾದಲ್ಲಿ ಅರಣ್ಯ ಪ್ರದೇಶವನ್ನು ದಾಖಲೆಯಲ್ಲಿ ಅರಣ್ಯ ಭೂಮಿಯನ್ನಾಗಿ ಕಾಯ್ದಿಟ್ಟು ಅರಣ್ಯ ಭೂಮಿಯ ರಕ್ಷಣೆ ಸಂರಕ್ಷಣೆ ಅಲ್ಲಿನ ಅರಣ್ಯವಾಸಿಗಳಿಗೆ ನೀಡಿ ಅರಣ್ಯ ಭೂಮಿಯನ್ನು ಕೃಷಿ ಹಾಗೂ ವಾಸ್ತವ್ಯಕ್ಕೆ ನೀಡಿರುವ ಅಂಶವನ್ನು ಗಮನಿಸಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು.

ಓರಿಸ್ಸಾ ಸರ್ಕಾರ ಅರಣ್ಯವಾಸಿಗಳಿಗೆ 30 ವರ್ಷಗಳ ಹಿಂದೆ ನಿಗದಿಗೊಳಿಸಿದ ಮಾನದಂಡವನ್ನೇ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಒತ್ತಡ ಸೃಷ್ಟಿಸಿದರೆ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸಲು ಸಾಧ್ಯ’ ಎಂದರು.

ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಸಂಚಾಲಕರಾದ ಇಬ್ರಾಹಿಂ ನಬಿಸಾಬ್‌, ದೇವರಾಜ ಮರಾಠಿ, ತಿಮ್ಮಾ ಮರಾಠಿ, ರಾಜೇಶ ಮಡಿವಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.