ADVERTISEMENT

ಜಿಲ್ಲೆಯಲ್ಲಿ ಕೃಷಿ ವಿಮಾ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:35 IST
Last Updated 16 ಜೂನ್ 2012, 9:35 IST

ಶಿರಸಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪರಿವರ್ತಿತ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ರಾಜ್ಯ ಸರ್ಕಾರದ ಆದೇಶದನ್ವಯ ಮುಂಗಾರು ಹಂಗಾಮಿನಲ್ಲಿ ಉತ್ತರ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ತಿಳಿಸಿದೆ.

ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಾಗೂ ಕೆಡಿಸಿಸಿ ಬ್ಯಾಂಕ್‌ನ ಶಾಖೆಗಳಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆಯುವ ರೈತರು ಇದೇ 30ರ ಒಳಗೆ ಸಾಲ ಮಂಜೂರು ಆಗಿದ್ದರೆ, ಮಂಜೂರಾದ ಬೆಳೆ ಸಾಲದ ಮೊತ್ತವನ್ನು ವಿಮೆಗೆ ಒಳಪಡಿಸುವುದು ಕಡ್ಡಾಯ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಮಾವಿನಕುರ್ವೆ ತಿಳಿಸಿದ್ದಾರೆ.

ಸಾಲಗಾರರಲ್ಲದ ರೈತರಿಗೆ ಈ ಯೋಜನೆ ಐಚ್ಛಿಕವಾಗಿದ್ದು ವಿಮಾ ಕಂತಿನ ಹಣವನ್ನು ಇದೇ 30ರ ಒಳಗೆ ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದು.ಹಳಿಯಾಳ ತಾಲ್ಲೂಕಿನ ಎಲ್ಲ ಹೋಬಳಿ ಹಾಗೂ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಹೋಬಳಿಯಲ್ಲಿ ಬೆಳೆಯುವ ಹತ್ತಿ ಬೆಳೆಗೆ ಹೋಬಳಿ ಮಟ್ಟದಲ್ಲಿ ವಿಮೆ ಇಳಿಸಲು ಅವಕಾಶವಿದೆ. ನೀರಾವರಿ ಬತ್ತ, ಮಳೆ ಆಶ್ರಿತ ಬತ್ತ, ಮಳೆ ಆಶ್ರಿತ ಮುಸುಕಿನ ಜೋಳ ಬೆಳೆಗಳಿಗೆ ಅಧಿಸೂಚಿತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಮೆ ಇಳಿಸಬಹುದು ಎಂದು ತಿಳಿಸಲಾಗಿದೆ.

ಸಾಲಗಾರ ರೈತರಿಗೆ ನೀರಾವರಿ ಬತ್ತ ಮತ್ತು ಮಳೆ ಆಶ್ರಿತ ಬತ್ತಕ್ಕೆ ಪ್ರತಿ ಹೆಕ್ಟೇರ್‌ಗೆ ರೂ.19,768, ಸಾಲಗಾರರಲ್ಲದ ರೈತರಿಗೆ ಕ್ರಮವಾಗಿ ರೂ.16,200 ಮತ್ತು ರೂ.16,100 ಇದೆ. ಮಳೆ ಆಶ್ರಿತ ಮುಸುಕಿನ ಜೋಳಕ್ಕೆ ಸಾಲಗಾರ ರೈತರಿಗೆ ರೂ.22,239 ಹಾಗೂ ಸಾಲಗಾರರಲ್ಲದ ರೈತರಿಗೆ ರೂ.20,900, ಮಳೆ ಆಶ್ರಿತ ಹತ್ತಿಗೆ ಸಾಲಗಾರ ರೈತರಿಗೆ ರೂ.27,181 ಹಾಗೂ ಸಾಲಗಾರರಲ್ಲದ ರೈತರಿಗೆ ರೂ. 6,500 ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಕೆಡಿಸಿಸಿ ಬ್ಯಾಂಕ್ ಶಾಖೆ ಸಂಪರ್ಕಿಸಬಹುದು ಎಂದು ಅವರು ವಿವರಿಸಿದ್ದಾರೆ.

`ಪುಷ್ಪ ಹರಾಜು ಕೇಂದ್ರಕ್ಕೆ ಶೀಘ್ರ  ಭೂಮಿ ಪೂಜೆ~
ಶಿರಸಿ:
ನಗರದ ತೆರಕನಳ್ಳಿ ಫಾರ್ಮ್‌ನಲ್ಲಿ ನಿರ್ಮಾಣಗೊಳ್ಳಲಿರುವ ಅತ್ಯಾಧುನಿಕ ಪುಷ್ಪ ಹರಾಜು ಕೇಂದ್ರದ ಭೂಮಿಪೂಜೆ ಸದ್ಯದಲ್ಲಿ ನಡೆಯಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ ತಿಳಿಸಿದ್ದಾರೆ.

ಹರಾಜು ಮಳಿಗೆ, ಶೈತ್ಯಾಗಾರ ಸೇರಿದಂತೆ ಸಕಲ ಸೌಲಭ್ಯ ಒಳಗೊಂಡ ಪುಷ್ಪ ಹರಾಜು ಕೇಂದ್ರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ

ಸಭೆ: ತೋಟಗಾರಿಕಾ ಬೆಳೆಗಳ ಖರೀದಿದಾರರು, ಮಾರಾಟಗಾರರು ಹಾಗೂ ಸಂಸ್ಕರಣೆಯಲ್ಲಿ ನಿರತರಾದ ರೈತರ ಸಭೆಯನ್ನು ಇಲ್ಲಿನ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಇದೇ 21ರ ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ತೋಟಗಾರಿಕಾ ಬೆಳೆಗಳು ಅಭಿವೃದ್ಧಿ ಹೊಂದುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆಯಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಅದಕ್ಕೆ ಬೇಕಾದ ಪೂರಕ ಕ್ರಮಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.