ADVERTISEMENT

‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿ ಸರ್ಕಾರ’

ಅರಣ್ಯದಲ್ಲಿ ಗಿಡನೆಟ್ಟು ಬೆಳೆಸುವ ಕಾರ್ಯಕ್ಕೆ ಯುವಕರ ನೇಮಕ: ಎಚ್.ಡಿ.ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 8:20 IST
Last Updated 17 ಮಾರ್ಚ್ 2018, 8:20 IST
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.   

ಕುಮಟಾ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ ಸರ್ಕಾರ ಹಳ್ಳಿಗಳಲ್ಲಿ ನಡೆಯುತ್ತದೆಯೇ ಹೊರತು ವಿಧಾನಸೌಧದಲ್ಲಿ ಅಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪಕ್ಷದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾದರೆ ಈ ಜಿಲ್ಲೆಯ ಗ್ರಾಮೀಣ ನಿರುದ್ಯೋಗಿ ಯುವಕ–ಯುವತಿಯರನ್ನು ಅರಣ್ಯದಲ್ಲಿ ಗಿಡನೆಟ್ಟು ಬೆಳೆಸುವ ಕೆಲಸಕ್ಕೆ ನೇಮಕ ಮಾಡಿಕೊಂಡು ಮಾಸಿಕ ಸಂಬಳ ನೀಡಲಾಗುವುದು. ರೈತರು ಹಾಗೂ ಮೀನುಗಾರರನ್ನು ವಿಧಾನಸೌಧಕ್ಕೇ ಕರೆಸಿಕೊಂಡು ಅವರ ಸಮಸ್ಯೆ ಆಲಿಸುವ ವ್ಯವಸ್ಥೆ ಕಲ್ಪಿಸುತ್ತೇನೆ. ಈ ಜಿಲ್ಲೆಯಲ್ಲಿ 25 ವರ್ಷ ಅಧಿಕಾರ ನಡೆಸಿದ ಅನಂತಕುಮಾರ ಹೆಗಡೆ ಮನೆ ಮನೆಗಳನ್ನು ಒಡೆದು ಆಳುತ್ತಿದ್ದಾರೆ. ಇಂತವರು ನಿಮಗೆ ಮುಂದೆ ಬೇಕಾ’ ಎಂದು ಪ್ರಶ್ನಿಸಿದರು.

ADVERTISEMENT

ಪಕ್ಷದ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ಈ ಹಿಂದೆ ದಿನಕರ ಶೆಟ್ಟಿ ಅವರು ಜೆಡಿಎಸ್‌ನಿಂದ ಕುಮಟಾ ಕ್ಷೇತ್ರದ ಶಾಸಕರಾಗಿದ್ದರು. ಈಗ ಅವರಿಗೆ ಯಾವ ರೋಗ ಬಂದಿತೋ ಗೊತ್ತಿಲ್ಲ, ಬಿಜೆಪಿಗೆ ಹೋದರು. ಆದರೆ, ಅವರಿಗೆ ಅಲ್ಲಿ ಕೊನೆಯ ಸ್ಥಾನ ಸಿಕ್ಕಿದೆ. ಮುಂದೊಂದು ದಿನ ಅವರು ಕಾಣೆಯಾಗಿಬಿಡುತ್ತಾರೆ’ ಎಂದು ಟೀಕಿಸಿದರು.

ಮುಖಂಡ ಶಶಿಭೂಷಣ ಹೆಗಡೆ ಮಾತನಾಡಿ, ‘ರಾಮೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 40 ಸಾವಿರ ರೈತರಿಗೆ ಅನುಕೂಲ ಆಗಲೆಂದು ಅಘನಾಶಿನಿ ನದಿ ಅಂಚಿಗೆ ಉಪ್ಪುನೀರು ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಅದನ್ನು ಈಗಿನ ಸರ್ಕಾರ ದುರಸ್ತಿ ಕೂಡ ಮಾಡಿಲ್ಲ’ ಎಂದು ದೂರಿದರು.

ಮತ್ತೊಬ್ಬ ಮುಖಂಡ ಪ್ರದೀಪ ನಾಯಕ ಮಾತನಾಡಿ, ‘20 ವರ್ಷಗಳಿಂದ ಕುಮಟಾ ಕ್ಷೇತ್ರದಲ್ಲಿ ಒಂದೇ ಕುಟುಂಬ ಅಧಿಕಾರ ನಡೆಸುತ್ತಿದೆ. ಅದು ಈ ಸಲ ಬದಲಾಗಬೇಕು’ ಎಂದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಇಮಾಮ್ ಘನಿ, ಮುಖಂಡರಾದ ಕಾಂಗ್ರೆಸ್‌ನ ಲಲಿತಾ ಪಟಗಾರ ಸೇರಿದಂತೆ ಹಲವರು ಜೆಡಿಎಸ್ ಸೇರ್ಪಡೆಗೊಂಡರು. ಆನಂದ ಅಸ್ನೋಟಿಕರ್ ಮಾತನಾಡಿದರು.

ಮುಖಂಡರಾದ ಮರಿತಿಬ್ಬೇಗೌಡ, ಸಯ್ಯದ್ ಅಲ್ತಾಫ್, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಗಜು ನಾಯ್ಕ ಅಳ್ವೆಕೋಡಿ, ಗಣಪಯ್ಯ ಗೌಡ ಇದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಪಟಗಾರ ಸ್ವಾಗತಿಸಿದರು. ನೀಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಮೆರವಣಿಗೆ ನಡೆಯಿತು.

ಸಚಿವರಿಂದ ಅತಿಕ್ರಮಣ: ಆರೋಪ
‘ಸಚಿವ ಆರ್.ವಿ.ದೇಶಪಾಂಡೆ ಅವರು ಜಕ್ಕೂರು ಅರಣ್ಯ ಪ್ರದೇಶದ ಐದು ಎಕರೆ ಜಾಗವನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಅವರನ್ನು ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸಿದರೇ‘ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ವಾರ ಈ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿ ಇಲ್ಲಿನ ಅರಣ್ಯಭೂಮಿ ಅತಿಕ್ರಮಣದಾರರ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಯೇ ಹೊರಗೆ ಹೋಗುತ್ತೇನೆ’ ಎಂದು ಭರವಸೆ ನೀಡಿದರು.


ಕುಮಟಾದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೇ ಪಾಲ್ಗೊಂಡ ಜನಸ್ತೋಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.