ADVERTISEMENT

ಜೋಯಿಡಾ ತಾಲ್ಲೂಕು ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 5:55 IST
Last Updated 2 ಮಾರ್ಚ್ 2012, 5:55 IST

ಜೋಯಿಡಾ: ಹುಲಿ ಯೋಜನೆ ವಿರೋಧಿಸಿ, ತಾಲ್ಲೂಕಿಗೆ ಮೂಲಭೂತ ಅಭಿವೃದ್ಧಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ಜೋಯಿಡಾ ತಾಲ್ಲೂಕಿನ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೇ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟ ಜೋಯಿಡಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಬೇಕು. ರಸ್ತೆ-ಸೇತುವೆಗಳ ನಿರ್ಮಾಣ ಆಗಬೇಕು. ಶಿಕ್ಷಕರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಡಬೇಕು, ಹುಲಿ ಯೋಜನೆ ಕೈಬಿಡಬೇಕು ಎಂದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಪುಲಕರ, ಜಿಲ್ಲಾ ಕಾರ‌್ಯದರ್ಶಿ ಶಾಂತಾರಾಮ ನಾಯಕ , ತಾಲ್ಲೂಕು ಕಾರ್ಯದರ್ಶಿ ಪ್ರೇಮಾನಂದ ವೇಳಿಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ನಾರಾಯಣ ವೇಳಿಪ, ಕಾರ್ಮಿಕ ಮುಖಂಡರಾದ ಯಮುನಾ ಗಾಂವಕರ, ರೈತ ಸಂಘದ ದಿಗಂಬರ ದೇಸಾಯಿ, ರಾಜೇಶ ಗೌಡ , ಶಾಂತಾ ವೇಳಿಪ, ಬಾಳಸೋ ಕುಂಡಲಕರ, ಅನಂತ ದೇಸಾಯಿ, ಮಾಹಾದೇವ ಮಿರಾಶಿ, ದತ್ತಾ ದೇಸಾಯಿ, ರವಿ ಡಿಗ್ಗಿ ಹಾಜರಿದ್ದರು.

ಬೇಡಿಕೆಗಳ ಬಗ್ಗೆ ಜೋಯಿಡಾ ತಹಶೀಲ್ದಾರ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು,  ಪ್ರಮುಖ ಬೇಡಿಕೆಗಳು ಈಡೇರಿಸುವವರೆಗೂ ಹೋರಾಟ ಮುಂದುವರಿಸಲು ಸಂಘ ತಿರ್ಮಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.