ADVERTISEMENT

ಟಿಬೆಟನ್ ಧರ್ಮಗುರುವಿಗೆ ಸಾಂಪ್ರದಾಯಿಕ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:55 IST
Last Updated 18 ಜುಲೈ 2013, 6:55 IST

ಮುಂಡಗೋಡ: ಟಿಬೆಟನ್ ಧರ್ಮಗುರು ದಲೈ ಲಾಮಾ  ಇಲ್ಲಿನ ಟಿಬೆಟನ್ ಕ್ಯಾಂಪ್‌ಗೆ ಬುಧವಾರ ಆಗಮಿಸಿದ್ದು ಅವರನ್ನು ತಾಲ್ಲೂಕಿನ ಗಡಿಭಾಗದ ಸನವಳ್ಳಿ ಹೊರವಲಯದಲ್ಲಿ ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್ ಹೂಗುಚ್ಛ ನೀಡಿ ಸ್ವಾಗತಿಸಿದರು.

ಶಿವಮೊಗ್ಗದಿಂದ ಹಾವೇರಿ ಮಾರ್ಗವಾಗಿ ಬಂಕಾಪುರ ಮೂಲಕ ತಾಲ್ಲೂಕಿಗೆ ಪ್ರವೇಶಿಸಿದ ಟಿಬೆಟನ್ ಧರ್ಮಗುರುವನ್ನು ಜಿಲ್ಲಾಡಳಿತದ ವತಿಯಿಂದ ಆದರದಿಂದ ಸ್ವಾಗತಿಸಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ, ಶಿರಸಿ ಡಿವೈಎಸ್‌ಪಿ ಎನ್.ಡಿ.ಬಿರ್ಜೆ, ಉಪವಿಭಾಗಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಆರ್.ಬಿ.ಪಾಟೀಲ, ಬಸವರಾಜ ಮೆಳವಂಕಿ, ಪಂಚಾಯತ್ ರಾಜ ಎಂಜಿನಿಯರ್ ಆರ್.ಎಚ್.ಕುಲಕರ್ಣಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಭದ್ರತೆ: ಬೋಧಗಯಾ ಘಟನೆಯಿಂದ ಟಿಬೆಟನ್ ಧರ್ಮಗುರು ದಲೈಲಾಮಾ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ್ ಹೇಳಿದರು.ಕ್ಯಾಂಪ್ ನಂ.6ರ ಗಾಡೆನ್ ಲಾಚಿ ಬೌದ್ಧಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ದಲೈಲಾಮಾ ಅವರ ಕಾರ್ಯಕ್ರಮ ನಡೆಯುವ ಬೌದ್ಧ ಮಂದಿರದ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು ಟಿಬೆಟನ್ ಕ್ಯಾಂಪ್‌ನಲ್ಲಿ ಸಂಚರಿಸುವ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲಾಗುತ್ತದೆ.

ಸಂಶಯಾಸ್ಪದವಾಗಿ ಸಂಚರಿಸುವ ವ್ಯಕ್ತಿಗಳು ಕಂಡರೆ ಕೂಡಲೇ ತನಿಖೆ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಯವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡು ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.