ADVERTISEMENT

ತಂಪೆರೆದ ಮೊದಲ ಮಳೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 9:15 IST
Last Updated 4 ಏಪ್ರಿಲ್ 2012, 9:15 IST

ದಾಂಡೇಲಿ: ಕಳೆದ ತಿಂಗಳಿಂದ ಬಿಸಿಲಿನ ಧಗೆಯಿಂದ ತತ್ತರಿಸಿದ್ದ ನಗರದಲ್ಲಿ ಮಂಗಳವಾರ ಸಂಜೆ 4 ಗಂಟೆಯಿಂದ ಮಳೆ ಸುರಿದು  ವಾತಾವರಣ ತಂಪಾಯಿತು. 

ಇದ್ದಕ್ಕಿದ್ದಂತೆ ದಟ್ಟವಾದ ಮೋಡ ಕವಿದು ಮಳೆ ಸುರಿಯಲಾರಂಭಿಸಿದ್ದರಿಂದ ನಗರದ ಜನರು ಕೆಲ ಕಾಲ ತಂಪಾದ ವಾತಾವರಣ ಅನುಭವಿಸುವಂತಾಯಿತು. ಮಳೆಯ ರಭಸದಿಂದ ರಸ್ತೆಯ ಮೇಲೆಲ್ಲ ಅಪಾರ ಪ್ರಮಾಣದ ನೀರು ಹರಿದಿದ್ದರಿಂದ ಕೆಲಕಾಲ ಚರಂಡಿಗಳು ತುಂಬಿ ಹರಿದವು. ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿದಿದ್ದು, ಯಾವುದೇ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ.

ಶಿರಸಿ ವರದಿ

 ನಗರದಲ್ಲಿ ಸೋಮವಾರ ವರ್ಷದ ಮೊದಲ ಮಳೆಯ ಅನುಭವವಾಯಿತು. ಭಾನುವಾರ ಸಂಜೆಯಿಂದ ನಿರೀಕ್ಷಿಸಿದ್ದ ಮಳೆ ಸೋಮವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಸುರಿದು ಕಾದ ಇಳೆಗೆ ತಂಪೆರೆಯಿತು. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮೊದಲ ಮಳೆ ಕಂಡು ಸಮಾಧಾನಪಟ್ಟರು. ಆದರೆ ಮಳೆಯ ಖುಷಿ ಅನುಭವಿಸುವ ಮುನ್ನವೇ ವಾತಾವರಣ ತಿಳಿಯಾಯಿತು.

ಭಾನುವಾರ ಸಂಜೆಯಿಂದ ಆಗಸದಲ್ಲಿ ಗುಡುಗು ಮಿಂಚಿನ ಸದ್ದು ಜೋರಾಗಿತ್ತು. ಗ್ರಾಮೀಣ ಭಾಗದ ಕೆಲ ಪ್ರದೇಶಗಳಲ್ಲಿ ಮಾತ್ರ ತುಂತುರು ಮಳೆಯಾಗಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ಮೋಡದ ವಾತಾವರಣ ಸೃಷ್ಠಿಯಾಗಿ 15 ನಿಮಿಷಗಳ ಕಾಲ ಮಳೆ ಸುರಿಯಿತು. ಪರೀಕ್ಷೆ ಮುಗಿಸಿ ರಜೆಯ ಮಜ ಅನುಭವಿಸುತ್ತಿರುವ ಮಕ್ಕಳು ಮಳೆಯಲ್ಲಿ ಆಟವಾಗಿ ಸಂತಸಪಟ್ಟರು. ಮಳೆ ಬಿದ್ದರೂ ವಾತಾವರಣದಲ್ಲಿನ ಸೆಖೆ ಮಾತ್ರ ಕಡಿಮೆಯಾಗಿಲ್ಲ. ಒಂದು ತಿಂಗಳಿನಿಂದ ನಗರದಲ್ಲಿ ವಿಪರೀತ ಸೆಖೆಯ ಅನುಭವವಾಗುತ್ತಿದೆ.

ಮುಂಡಗೋಡ ವರದಿ
ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲ ಧಗೆಯಿಂದ ತತ್ತರಿಸಿದ ಜನರು ಸೋಮವಾರ ಸುರಿದ ವರ್ಷದ ಮೊದಲ ತುಂತುರು ಮಳೆಯಿಂದ ಕೊಂಚ ತಂಪನ್ನು ಅನುಭವಿಸಿದರು.

ಕಳೆದ ಹಲವು ದಿನಗಳಿಂದ ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರು ಮಳೆರಾಯನ ಆಗಮನಕ್ಕೆ ಹಾತೊರೆಯುತ್ತಿದ್ದರು. ಮಧ್ಯಾಹ್ನದ ವೇಳೆಗೆ ನೆತ್ತಿಯ ಮೇಲೆ ಸುಡುತ್ತಿದ್ದ ಸೂರ್ಯನನ್ನು ಮೋಡ ಕವಿದು ಸುಮಾರು 15-20 ನಿಮಿಷ ಮಳೆ ಸುರಿದು ಭೂಮಿಯನ್ನು ಕೆಲ ಮಟ್ಟಿಗೆ ತಣ್ಣಗಾಗಿಸಿತು. ಸೋಮವಾರದ ಸಂತೆಗೆ ಬಂದ ಜನರು ಏಕಾಏಕಿ ಬಂದ ವರುಣನ ಆಗಮನದಿಂದ ಅತ್ತಿಂದಿತ್ತ ಓಡಾಡಿದರು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ತಂದತ್ತ ಕೊಡೆಯನ್ನು ಏರಿಸಿ ಕೆಲವರು ಮಳೆರಾಯನನ್ನು ಸ್ವಾಗತಿಸಿದರೆ ಮತ್ತೆ ಕೆಲವರು ತುಂತುರು ಮಳೆಯಲ್ಲಿಯೇ ನೆನೆದು ಆನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.