ADVERTISEMENT

ತಲೆನೋವು ತಂದಿಟ್ಟ ಬ್ಯಾರಿಕೇಡ್ ಕೊರತೆ!

ರೋಡ್‌ ಷೋ: ಹೆದ್ದಾರಿಯಲ್ಲಿ 1 ಕಿ.ಮೀ ಸಾಗಲು ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:40 IST
Last Updated 26 ಏಪ್ರಿಲ್ 2018, 11:40 IST
ರಾಹುಲ್ ಗಾಂಧಿ ಗುರುವಾರ ಕುಮಟಾಕ್ಕೆ ಆಗಮಿಸುವ ಕಾರಣ ಭದ್ರತೆ ದೃಷ್ಟಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಹೆದ್ದಾರಿಯ ಬದಿಯಲ್ಲಿ ತಂತಿ ಬೇಲಿ ಅಳವಡಿಸಲಾಗಿದೆ
ರಾಹುಲ್ ಗಾಂಧಿ ಗುರುವಾರ ಕುಮಟಾಕ್ಕೆ ಆಗಮಿಸುವ ಕಾರಣ ಭದ್ರತೆ ದೃಷ್ಟಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಹೆದ್ದಾರಿಯ ಬದಿಯಲ್ಲಿ ತಂತಿ ಬೇಲಿ ಅಳವಡಿಸಲಾಗಿದೆ   

ಕುಮಟಾ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಯ ಕರಾವಳಿ ಭಾಗದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ದಿನ ರೋಡ್ ಷೋ ಹಾಗೂ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಸಂಬಂಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಎಸ್‌ಪಿಜಿ (ವಿಶೇಷ ರಕ್ಷಣಾ ದಳ)ಅಧಿಕಾರಿಗಳಿಗೆ ಭದ್ರತಾ ವ್ಯವಸ್ಥೆಮಾಡುವುದು ತಲೆನೋವಾಗಿ ಪರಿಣಮಿಸಿದೆ.

ರಾಹುಲ್ ಗಾಂಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರವೇ ಎಸ್‌ಪಿಜಿ ಅಧಿಕಾರಿಗಳು ಮೆರವಣಿಗೆ ನಡೆಸುವ ಹೆದ್ದಾರಿ ಭಾಗದ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದಾರೆ.

‘ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಸೇರಿ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೇ ದಿನ ರಾಹುಲ್ ಗಾಂಧಿ ರೋಡ್ ಷೋ ಇದೆ. ಇಲ್ಲಿಯ ಬ್ಯಾರಿಕೇಡ್‌ಗಳನ್ನು ಬೇರೆ ಬೇರೆ ಕಡೆಗೆ ಒಯ್ದಿದ್ದಾರೆ. ಮೆರವಣಿಗೆ ಸಾಗುವ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಭದ್ರತಾ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಇತರ ನಾಯಕರು ಬೇರೆಯದೇ ರೀತಿ ಸೂಚನೆ ನೀಡಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿ ಬದಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ರೋಡ್ ಷೋ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ವ್ಯವಸ್ಥೆ ಮಾಡಿ ಎಂದು ಮುಖಂಡರು ಸೂಚಿಸಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಲೆನೋವಾಗಿ ಪರಿಣಮಿಸಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಸದ್ಯ ನಿಗದಿತ ಕಾರ್ಯಕ್ರಮದಂತೆ ವಿ.ಪಿ.ಪೆಟ್ರೋಲ್ ಬಂಕ್‌ನ ಮಾಸ್ತಿಕಟ್ಟೆ ವೃತ್ತದಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯವರೆಗೆ ಹೆದ್ದಾರಿಯಲ್ಲಿ ಎರಡೂ ಬದಿಗಳಿಗೆ ತಂತಿ ಬೇಲಿ ಅಳವಡಿಸಲಾಗುತ್ತಿದೆ. ಇದು ಸುಮಾರು 300 ಮೀಟರ್‌ ದೂರವಿದೆ. ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಹೆದ್ದಾರಿಯಲ್ಲಿ ಸುಮಾರು 15 ನಿಮಿಷ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಅಲ್ಲಿಯೇ ರಾಹುಲ್ ಗಾಂಧಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.