ADVERTISEMENT

ತ್ರಿಕೋನ ಸ್ಪರ್ಧೆಯ ಕಣ ಜಿಲ್ಲಾಕೇಂದ್ರ

ಮಹಿಳಾ ಮತದಾರರು ಅಧಿಕವಿರುವ ಕಾರವಾರ– ಅಂಕೋಲಾ ವಿಧಾನಸಭೆ ಕ್ಷೇತ್ರ

ಸದಾಶಿವ ಎಂ.ಎಸ್‌.
Published 9 ಮೇ 2018, 12:37 IST
Last Updated 9 ಮೇ 2018, 12:37 IST
ತ್ರಿಕೋನ ಸ್ಪರ್ಧೆಯ ಕಣ ಜಿಲ್ಲಾಕೇಂದ್ರ
ತ್ರಿಕೋನ ಸ್ಪರ್ಧೆಯ ಕಣ ಜಿಲ್ಲಾಕೇಂದ್ರ   

ಕಾರವಾರ: ಜಿಲ್ಲಾ ಕೇಂದ್ರವನ್ನೂ ಒಳಗೊಂಡಿರುವ ಕಾರವಾರ– ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ರೂಪಾಲಿ ನಾಯ್ಕ, ಕಾಂಗ್ರೆಸ್‌ನಿಂದ ಸತೀಶ್ ಸೈಲ್, ಜೆಡಿಎಸ್‌ನಿಂದ ಆನಂದ ಅಸ್ನೋಟಿಕರ್ ಕಣದಲ್ಲಿದ್ದಾರೆ. ಇವರ ನಡುವೆ ಎನ್‌ಸಿಪಿ ಅಭ್ಯರ್ಥಿಯಾಗಿರುವ ಮಾಧವ ನಾಯಕ ಕೂಡ ಅಚ್ಚರಿಯ ಫಲಿತಾಂಶ ನೀಡುವ ಕಾತರದಲ್ಲಿದ್ದಾರೆ.

ಈ ಬಾರಿ ಸಮಬಲರ ಕಾದಾಟ ನಡೆಯುತ್ತಿರುವ ಕಾರಣ ಯಾರ ಮೇಲುಗೈ ಎಂಬುದು ಈಗಲೇ ಊಹಿಸುವುದು ಕಷ್ಟ ಎಂಬ ಅಭಿಪ್ರಾಯ ಕಾರವಾರದ ಕೆಎಚ್‌ಬಿ ಕಾಲೊನಿ ನಿವಾಸಿ ರಘುನಾಥ ಅವರದ್ದು. ಇದೇ ಅಭಿಪ್ರಾಯ ಕೋಡಿಬಾಗದ ಶ್ರೀಕಲಾ ಅವರದ್ದೂ ಆಗಿದೆ.

ಸತೀಶ್ ಸೈಲ್ ಈಗಾಗಲೇ ಒಂದು ಬಾರಿ ಶಾಸಕರಾದವರು. ಅದೇ ರೀತಿ, ಆನಂದ್ ಅಸ್ನೋಟಿಕರ್ 20008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದರೂ ಬಿಜೆಪಿ ಸೇರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರೂಪಾಲಿ ನಾಯ್ಕ ಅವರಿಗೆ ಇದೇ ಮೊದಲ ವಿಧಾನಸಭೆ ಚುನಾವಣೆ.

ADVERTISEMENT

2013ರಲ್ಲಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆ ಮಾಡಿದ್ದ ಸೈಲ್, ಕೊನೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಕಬ್ಬಿಣದ ಅದಿರು ಹಗರಣದಿಂದ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಗೋವಾದಲ್ಲಿ ಇದರ ವಿಚಾರಣೆ ಮುಂದುವರಿದಿದೆ. ಇದು ಅವರ ಪ್ರತಿಸ್ಪರ್ಧಿಗಳಿಗೆ ಒಳ್ಳೆಯ ಅಸ್ತ್ರ ನೀಡಿದಂತಾಗಿದ್ದು, ಟೀಕಾಪ್ರಹಾರ ಎದುರಿಸುವಂತಾಗಿದೆ.

ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಗಳನ್ನು ಸುತ್ತುತ್ತಿರುವ ಅವರು, ತಮಗೆ ಎರಡನೇ ಬಾರಿಗೆ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಅವರ ಪರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಿಧ ಸಚಿವರು ಅಂಕೋಲಾದಲ್ಲಿ ರೋಡ್‌ಷೋ ಮಾಡಿದ್ದರು.

ಆನಂದ್ ಅಸ್ನೋಟಿಕರ್ 2013ರಲ್ಲಿ ಸೋಲುಂಡ ಬಳಿಕ ನಾಲ್ಕೂವರೆ ವರ್ಷ ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದರು. ಆದರೆ, ಈ ಬಾರಿ ಜೆಡಿಎಸ್‌ನಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಪದೇಪದೆ ಪಕ್ಷ ಬದಲಿಸುವವರು ಎಂಬ ಆಪಾದನೆ ಅವರ ಮೇಲಿದೆ. ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ ಅವರು ಬಳಿಕ ಬಿಜೆಪಿ ಸೇರಿಕೊಂಡರು. ಆದರೆ, ಅವರ ತಂದೆ ದಿವಂಗತ ವಸಂತ ಅಸ್ನೋಟಿಕರ್ ಅವರ ಪ್ರಸಿದ್ಧಿ ಕೂಡ ಲಾಭವಾಗಬಹುದು ಎಂಬುದು ಆನಂದ್ ಅವರ ಲೆಕ್ಕಾಚಾರವಾಗಿದೆ.

ರೂಪಾಲಿ ನಾಯ್ಕ ಅವರಿಗೆ ದೊಡ್ಡಮಟ್ಟದಲ್ಲಿ ರಾಜಕೀಯ ಹೋರಾಟ ಮಾಡಿ ಅನುಭವ ಇಲ್ಲದಿದ್ದರೂ ಪ್ರತಿಸ್ಪರ್ಧಿಗಳಿಗಿಂತ ಕಮ್ಮಿಯಿಲ್ಲ ಎಂಬಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಪರವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕ್ಷೇತ್ರದ ವಿವಿಧೆಡೆ ಮತಯಾಚನೆ ಮಾಡುತ್ತಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೂ ಈಚೆಗೆ ಕಾರವಾರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರು ತಮ್ಮ ಅಸಮಾಧಾನವನ್ನು ಬದಿಗೊತ್ತಿ ಪಕ್ಷವೇ ಮುಖ್ಯ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ಮುಖಂಡ, ಕೆಎಫ್‌ಡಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ ಅವರನ್ನು ಈಚೆಗೆ ಬಿಜೆಪಿಗೆ ಸೇರಿಸಿಕೊಂಡಿರುವುದು ಮತ್ತೊಂದು ಗಮನಾರ್ಹ ಬೆಳವಣಿಗೆಯಾಗಿದೆ.

ಎನ್‌ಸಿಪಿಯ ಅಭ್ಯರ್ಥಿ ಮಾಧವ ನಾಯಕ ತಮಗಿರುವ ಜನಬೆಂಬಲವನ್ನು ಸಾಬೀತು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಆ ಪಕ್ಷ ತಿಳಿಸಿದ್ದರೂ ಕಾರವಾರದಲ್ಲಿ ಮಾತ್ರ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕುತೂಹಲಕಾರಿಯಾಗಿದೆ. ಕ್ಷೇತ್ರದಲ್ಲಿ ಕಿಶೋರ್ ಸಾವಂತ್, ಕುಂದಾಬಾಯಿ ಪರುಳೇಕರ ಅವರು ಪಕ್ಷೇತರರಾಗಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.