ADVERTISEMENT

ದಯಾಮರಣ ಸಾಮಾಜಿಕ ಶೋಷಣೆಗೆ ದಾರಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:10 IST
Last Updated 15 ಮಾರ್ಚ್ 2011, 6:10 IST

ಕುಮಟಾ:  ಸಹಜ ಸಾವು ಮೀರಿ ದಯಾ ಮರಣಕ್ಕೆ  ನಮ್ಮ ಉಚ್ಛ ನ್ಯಾಯಾಲಯವೇನಾದರೂ  ಸಮ್ಮತಿಸಿದರೆ ಮುಂದೆ ಸಮಾಜದಲ್ಲಿ ಅದೇ ಶೋಷಣೆಗೆ ಒಂದು ನೆವ ಆಗಬಹುದು ಎಂದು  ಕರ್ನಾಟಕ ಕಾನೂನು ವಿ.ವಿ. ಕುಲಪತಿ ಡಾ. ಜೈಪ್ರಕಾಶರೆಡ್ಡಿ ಎಸ್. ಪಾಟೀಲ್ ತಿಳಿಸಿದರು.ಕುಮಟಾ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ‘ಇಂಗ್ಲಿಷ್ ಅಸೋಸಿಯೇಶನ್’ ಸೋಮವಾರ ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ’ ಕುರಿತ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಕೈಕೊಂಡ ಹೆಚ್ಚಿನ ತಂತ್ರಜ್ಞಾನಗಳ ಪ್ರಯೋಜನವನ್ನು ಇಂದು ಅಮೆರಿಕಾ, ಚೈನಾದಂಥ ಮುಂದುವರಿದ ದೇಶಗಳು ಬಳಕೆ ಮಾಡಿಕೊಳ್ಳುತ್ತಿವೆ. ನಮ್ಮ ಸರಕಾರದ ಸಾಮಾಜಿಕ ಹಾಗೂ ರಾಜಕೀಯ ಬದ್ಧತೆಗಳ ಸಮಸ್ಯೆಯಿಂದಾಗಿ ಅವುಗಳ ಬಳಕೆಯ ಬಗ್ಗೆ ನಮ್ಮಲ್ಲಿ ಗೊಂದಲ ಉಂಟಾಗಿದೆ. ಸಮಾನತೆ ನಮ್ಮ ಸಂವಿಧಾನದ ಅನನ್ಯತೆಯ ಸಂಕೇತವಾದರೂ ದೇಶದಲ್ಲಿ ಶೇ. 60 ರಷ್ಟು ಜನರ ನಿತ್ಯದ ಆದಾಯ ಇಂದಿಗೂ 20 ರೂ. ಮಟ್ಟದಲ್ಲೇ ಇರುವ ಬಗ್ಗೆ ಸರಕಾರ ಏನು ಹೇಳುತ್ತಿದೆ? ಬಡವರ ಮೀಸಲಾತಿ, ವಿವಿಧ ಸೌಲಭ್ಯ, ಅಸ್ಪೃಶ್ಯತೆ ನಿವಾರಣೆ  ವಾಸ್ತವದಲ್ಲಿ  ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತದೆ?’ ಎಂದು ಅವರು ಪ್ರಶ್ನಿಸಿದರು.

‘ಅಲ್ಪಸಂಖ್ಯಾತರ ಹೊರತಾಗಿ ಹಿಂದುಗಳಿಗೆ ಮಾತ್ರ ಭಾರತ  ಸುರಕ್ಷಿತವೆನ್ನುವುದಾದರೆ ನಮ್ಮದು ನಿಜವಾದ ಪ್ರಜಾಪ್ರಭುತ್ವ ಎನಿಸಿಕೊಳ್ಳಲಾರದು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ಅದ್ಭುತವೆನಿಸುತ್ತದೆ. ಆದರೆ ಅದನ್ನು ಅನುಷ್ಠಾನಕ್ಕೆ ತರಲು ಹೊರಟರೆ ರಕ್ತ ಚೆಲ್ಲಬೇಕಾದ ಪ್ರಸಂಗವೂ ಬರುತ್ತದೆ’ ಎಂದರು.

ಪ್ರಾಚಾರ್ಯ ಡಾ. ವಿ.ಕೆ. ಹಂಪಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಾಲೇಜು ಸೊಸೈಟಿ ಕಾರ್ಯುದರ್ಶಿ ವೈ.ವಿ. ಶಾನಭಾಗ, ಇಂಗ್ಲಿಷ್ ಅಸೋಸಿಯೇಶನ್ ಸಂಚಾಲಕ ಡಾ. ಎಂ.ಜಿ. ಹೆಗಡೆ ವೇದಿಕೆಯಲ್ಲಿದ್ದರು. ಪ್ರಫುಲ್ಲಾ ಹಾಗೂ ಚಿತ್ರಾ ನಾಯ್ಕ ನಿರೂಪಿಸಿದರು. ಅಶ್ವಿನಿ ಮುಕ್ರಿ ಪ್ರಾರ್ಥನೆ ಗೀತೆ ಹಾಡಿದರು. ನಿವೃತ್ತ ಪ್ರಾಚಾರ್ಯ ಪ್ರೊ. ಆನಂದ ರಾವ್, ಡಾ. ಎಸ್.ವಿ. ಕಾಮತ್, ನಿವೃತ್ತ ಪ್ರಾಧ್ಯಾಪಕ ಗಾಂವ್ಕರ್ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.