ADVERTISEMENT

`ನದಿ ಸೇತುವೆ ಮೇಲೆ ದೀಪ ಅಳವಡಿಸಿ'

ಸುರಿಯುವ ಮಳೆಯಲ್ಲೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:44 IST
Last Updated 20 ಜುಲೈ 2013, 9:44 IST
ಕಾಳಿ ಸೇತುವೆ ಮೇಲೆ ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿ ಪಕ್ಷಾತೀತ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ  ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-17ರಲ್ಲಿ  ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು.
ಕಾಳಿ ಸೇತುವೆ ಮೇಲೆ ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿ ಪಕ್ಷಾತೀತ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು.   

ಕಾರವಾರ:  ಕಾಳಿ ಸೇತುವೆ ಮೇಲೆ ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿ ಪಕ್ಷಾತೀತ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ ತಾಲ್ಲೂಕಿನ ಸದಾಶಿವಗಡದ ಕಾಳಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ-17 ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕಾಳಿ ಸೇತುವೆಯ ಸದಾಶಿವಗಡ ಭಾಗದಲ್ಲಿ ಸೇರಿದ ವೇದಿಕೆ ಕಾರ್ಯಕರ್ತರು, ಸುರಿಯುತ್ತಿರುವ ಮಳೆಯ ನಡುವೆಯೂ ಕೊಡೆ ಹಿಡಿದು ರಸ್ತೆ ತಡೆ ನಡೆಸಿದರು. ನಗರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಳಿ ಸೇತುವೆ ನಿರ್ಮಾಣವಾಗಿ 20 ವರ್ಷ ಕಳೆದರೂ ಸೇತುವೆ ಮೇಲೆ ಸರಿಯಾದ ಬೀದಿ ದೀಪದ ವ್ಯವಸ್ಥೆ ಮಾಡಿಲ್ಲ. ಸೇತುವೆ ಉದ್ದಕ್ಕೂ ವಿದ್ಯುತ್ ದೀಪದ ಕಂಬಗಳು ಇರುವುದು ಬಿಟ್ಟರೆ ಯಾವ ಕಂಬಕ್ಕೂ ದೀಪ ಇಲ್ಲ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವೊಮ್ಮೆ ಸೇತುವೆ ಮೇಲೆ ದೀಪ ಅಳವಡಿಸಿದ್ದರೂ ಅದು ಕೆಲವೇ ದಿನಕ್ಕೆ ಹಾಳಾಗುತ್ತದೆ. ಇದರಿಂದ ಇಲ್ಲಿ ಅಕ್ರಮ ಮದ್ಯ ಸಾಗಣೆ, ದರೋಡೆ, ಕಳ್ಳತನ, ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತದೆ.

ಆದರೆ, ಮಳೆಗಾಲದಲ್ಲಿ ಸೇತುವೆಗೆ ಹೊಂದಿಕೊಂಡಿರುವ ಗುಡ್ಡದಿಂದ ಕಲ್ಲುಗಳು ರಸ್ತೆ ಮೇಲೆ ಬೀಳುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರು ರಾತ್ರಿ ವೇಳೆ ಆತಂಕದಲ್ಲಿಯೇ ಸೇತುವೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ನಾಯ್ಕ ಮಾತನಾಡಿ, ಕಾರವಾರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಾಳಿ ಸೇತುವೆಯೂ ಒಂದು. ಹೀಗಾಗಿ ಇಲ್ಲಿ ವಿಹರಿಸಲು ಪ್ರತಿ ದಿನ ಪ್ರವಾಸಿಗರು ಹಾಗೂ ಸ್ಥಳೀಯರು ಬರುತ್ತಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೀದಿದೀಪ ಅಳವಡಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆಯಿಂದ ಕೆಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರ್ ಮಹಮ್ಮದ್, ರಾಮಾ ನಾಯ್ಕ, ಬಾಬು ಶೇಖ, ಮಂಜುನಾಥ ನಾಯ್ಕ, ಸಾಯಿನಾಥ ಮೇತ್ರಿ, ಮಾಧವ ಅಸ್ನೋಟಿಕರ, ಗಂಗಾಧರ ಭಟ್, ಸಾಯಿನಾಥ ಹರಿಕಾಂತ, ಆರ್.ಎಸ್. ನಾಯ್ಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT