ADVERTISEMENT

`ಪತ್ರಕರ್ತ ಪತ್ರಿಕೋದ್ಯಮ ಮೌಲ್ಯದ ಪಾಲುದಾರ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 7:42 IST
Last Updated 17 ಜುಲೈ 2013, 7:42 IST

ದಾಂಡೇಲಿ: `ಪತ್ರಕರ್ತನು ಪತ್ರಿಕೋದ್ಯಮದ ಮೌಲ್ಯಗಳ ಒಬ್ಬ ಪಾಲುದಾರನಾಗಿ ಬೆಳೆಯಲು ಪ್ರಯತ್ನಿಸಬೇಕು' ಎಂದು ಪತ್ರಕರ್ತ ಗಂಗಾಧರ ಹಿರೇಗುತ್ತಿ ಹೇಳಿದರು.

ನಗರದ ಡಿಲಕ್ಸ್ ಸಭಾಭವನದಲ್ಲಿ ದಾಂಡೇಲಿ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಮಾಜದ ಶ್ರಮಜೀವಿಗಳಿಗೆ ಸನ್ಮಾನ ಅತ್ಯವಶ್ಯವಾಗಿದೆ. ಬದುಕನ್ನು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಸುತ್ತಲ ಪರಿಸರದಿಂದ ನಾವು ಪಾಠ ಕಲಿಯಲು ಸಾಧ್ಯ' ಎಂದರು.

ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಜಿ.ಗಿರಿರಾಜ, `ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾದ ಪತ್ರಿಕೋದ್ಯಮದಲ್ಲಿ ಪತ್ರಕರ್ತರು ಸಾಮಾಜಿಕ ಜಾಗೃತಿ ಹೆಚ್ಚಿಸಲು ಪ್ರಾಮಾಣಿಕ ಕರ್ತವ್ಯ ನಿಭಾಯಿಸಬೇಕು' ಎಂದರು.

ಕಾರ್ಯಕ್ರಮದಲ್ಲಿ ಕೆ.ಶ್ಯಾಮರಾವ್ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಾಲಕೃಷ್ಣ ರಾಮಚಂದ್ರ ವಿಭೂತೆ ಹಾಗೂ ಕೆ.ಎಸ್.ಆರ್.ಟಿ.ಸಿ ಕೂಲಿಕಾರ್ಮಿಕ  ಭಾಷಾ ಸೈಪುದ್ದೀನ್ ಪೀರಜಾದೆ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಯಲ್ಲಾಪುರದ ವೈಟಿಎಸ್‌ಎಸ್ ಕಾಲೇಜಿನ ಪ್ರಾಚಾರ್ಯ ಬೀರಣ್ಣ ನಾಯಕ ಹಾಗೂ ಪ್ರಾಚಾರ್ಯ ಯು.ಎಸ್.ಪಾಟೀಲ ಸಾಂದರ್ಭಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಕೆ.ಜಿ.ಪಾಟೀಲ ವಹಿಸಿದ್ದರು. ಕ್ಲಬ್‌ನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹೇಂದ್ರಕುಮಾರ.ಬಿ.ಪಿ. ಸ್ವಾಗತಿಸಿದರು. ಉಪೇಂದ್ರ ಘೋರ್ಪಡೆ ಸನ್ಮಾನಿತರನ್ನು ಪರಿಚಯಿಸಿದರು. ಬಿ.ಎನ್.ವಾಸರೆ ಕಾರ್ಯಕ್ರಮ ನಿರೂಪಿಸಿದರು. ಹಳಿಯಾಳ ಪತ್ರಕರ್ತ ಸಂಘದ ನಾಗರಾಜ ಶಹಪೂರಕರ, ಮಂಜುನಾಥ ಶೇರಖಾನೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.