ADVERTISEMENT

ಪತ್ರಿಕಾ ದಿನಾಚರಣೆ: ಬ್ಯಾಗ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 7:03 IST
Last Updated 1 ಆಗಸ್ಟ್ 2013, 7:03 IST

ಕಾರವಾರ: `ದೇವಸ್ಥಾನಗಳಿಗೆ ದಾನ, ದೇಣಿಗೆ ನೀಡುವುದಕ್ಕಿಂದ ಸಾಮಾಜಿಕ ಕಾರ್ಯಗಳಿಗೆ ನೀಡುವುದರಿಂದ ಹೆಚ್ಚು ಸಾರ್ಥಕವಾಗುತ್ತದೆ' ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಾಳಿಕರ ಹೇಳಿದರು.

ಕಾರವಾರ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆ ವತಿಯಿಂದ ತಾಲ್ಲೂಕಿನ ಕೋವೆ ಗ್ರಾಮದಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. `ಬಡವರು, ಹಿಂದಳಿದವರ ಅಭಿವೃದ್ಧಿಗೆ ದಾನ, ಧರ್ಮ ಮಾಡುವುದರಿಂದ ದೇವರು ಮೆಚ್ಚುತ್ತಾನೆ. ಇದರಿಂದ ವೈಯಕ್ತಿಕ ಗೌರವ ಬೆಳೆಯುವುದರ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಕುಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ನೀಡಿರುವುದು ಶ್ಲಾಘನೀಯ' ಎಂದ ಅವರು ತಾಲ್ಲೂಕು ಪಂಚಾಯ್ತಿಯಿಂದ ಕೋವೆ ಗ್ರಾಮದ ಶಾಲೆಗೆ ಡೆಸ್ಕ್‌ಗಳನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿಹರಿಕಾಂತ ಮಾತನಾಡಿ, `ಪತ್ರಿಕಾ ದಿನಾಚರಣೆ ಕೇವಲ ಕಾರ್ಯಕ್ರಮ ಆಗರದೇ ಅದು ಬಡವರಿಗೆ ನೆರವಾಗುವ ರೀತಿಯಲ್ಲಿರಬೇಕು. ಈ ನಿಟ್ಟಿನಲ್ಲಿ ಕೋವೆ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಈ ಗ್ರಾಮದಲ್ಲಿ ಶಾಲೆಗೆ ರಸ್ತೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶಾಸಕ ಸತೀಶ ಅವರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಶಾಸಕರು 50 ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಮರಕುಳಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ತುರ್ತಾಗಿ ಕಲ್ಪಿಸಿಕೊಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ' ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತ, ರಂಗಕರ್ಮಿ ಕೆ.ಆರ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು `ಹಳ್ಳಿಯ ಸಮಸ್ಯೆ ಜನಪ್ರತಿನಿಧಿಗಳು ಅರಿಯಬೇಕು ಎಂದರೆ, ಆ ಹಳ್ಳಿಗೆ ಪತ್ರಕರ್ತರು ಭೇಟಿ ನೀಡಿದಾಗ ಮಾತ್ರ ಸಾಧ್ಯ. ಹೀಗಾಗಿ ಪತ್ರಕರ್ತರು ಹಳ್ಳಿಯ ಸಮಸ್ಯೆಗಳನ್ನು ಹೆಚ್ಚಾಗಿ ವರದಿ ಮಾಡಬೇಕು' ಎಂದರು.

ಬ್ಯಾಗ್ ಹಾಗೂ ಚಪ್ಪಲಿ ವಿತರಣೆ: ಪತ್ರಿಕಾ ದಿನಾಚರಣೆ ನಿಮಿತ್ತ ಕೋವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಪಾದರಕ್ಷೆ, ಪಟ್ಟಿ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಸ್ಲೇಟು, ಬಳಪ ನೀಡಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಪಾದ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ಜನಶಕ್ತಿ ವೇದಿಕೆಯ ಮಾಧವ ನಾಯ್ಕ, ಗ್ರಾಮದ ಪ್ರಮುಖ ರಾಮಾ ಹೆದ್ದಾ ಗುನಗ, ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ನಾಯ್ಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ  ಹಾಜರಿದ್ದರು.

ವಾರ್ತಾಧಿಕಾರಿ ಶಫೀ ಸಾದುದ್ದೀನ್ ಸ್ವಾಗತಿಸಿದರು. ನಾಗರಾಜ ಹರಪನಹಳ್ಳಿ ನಿರೂಪಿಸಿದರು. ದಿನೇಶ ಯಲ್ಲಾಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.