ಶಿರಸಿ: ಗಿಡ-ಮರಗಳೆಲ್ಲ ಹಸಿರಾಗುವ, ನದಿ-ತೊರೆಗಳು ಉಕ್ಕಿ ಹರಿಯುವ ಮುಂಗಾರಿನ ಸಂಭ್ರಮದಲ್ಲಿ ಪರಿಸರ ಹೋರಾಟಗಾರ್ತಿಯೊಬ್ಬರಿಗೆ ಸನ್ಮಾನ, ಪರಿಸರ ಅಧ್ಯಯನ ವರದಿ ಪ್ರದರ್ಶನ, ಪರಿಸರ ಪೂರಕ ಬಯೋಗ್ಯಾಸ್ ಉದ್ಘಾಟನೆಯೊಂದಿಗೆ ಹಸಿರು ಪ್ರಜ್ಞೆ ಮೂಡಿಸುವ ಪರಿಸರ ಉತ್ಸವ ತಾಲ್ಲೂಕಿನ ಭೈರುಂಬೆ ಪ್ರೌಢಶಾಲೆಯಲ್ಲಿ ಗುರುವಾರ ವಿಶಿಷ್ಟವಾಗಿ ನಡೆಯಿತು.
ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ವೃಕ್ಷಲಕ್ಷ ಆಂದೋಲನ ಜಂಟಿಯಾಗಿ ಹಮ್ಮಿಕೊಂಡಿದ್ದ ಮುಂಗಾರು ಪರಿಸರ ಉತ್ಸವವನ್ನು ಹಿರಿಯ ವಿಜ್ಞಾನ ಪರಿಸರ ಬರಹಗಾರ ನಾಗೇಶ ಹೆಗಡೆ ಉದ್ಘಾಟಿಸಿದರು. `ಪುರಾಣದಲ್ಲಿ ಪಂಚಕನ್ಯೆಯರು ಪತಿವ್ರತೆಯರಾಗಿ ಪ್ರಸಿದ್ಧರಾಗಿದ್ದರು. ಇಂದು ಪರಿಸರ ಸಂರಕ್ಷಣೆಯಲ್ಲಿ ಪ್ರತಿ ಜಿಲ್ಲೆಯಲ್ಲಿ, ಪ್ರತಿ ತಾಲ್ಲೂಕಿನಲ್ಲಿ ಪಂಚಕನ್ಯೆಯರು ಗುರುತಿಸಿಕೊಳ್ಳುವಂತಾಗಬೇಕು. ನಿಸರ್ಗವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಧ್ವಂಸದ ಪಾತ್ರ ಪುರುಷನದ್ದಾಗಿದೆ. ಮನೆ, ಸಮಾಜ, ಸಂಸ್ಕೃತಿ, ಪರಂಪರೆ ರಕ್ಷಿಸುವ ಪವಿತ್ರ ನಿಸರ್ಗಮಾತೆಯ ಪಾತ್ರ ಹೆಣ್ಣಿನದ್ದಾಗಿದೆ' ಎಂದರು.
`ಭೂಮಿ, ವಿಜ್ಞಾನ, ಅಧ್ಯಾತ್ಮ ಒಂದಕ್ಕೊಂದು ಅಲವಂಬಿತವಾಗಿವೆ. ವಿಂಗಡಣೆಯಿಂದಾಗಿಯೇ ವಿಜ್ಞಾನ ಇಂದು ಹಾಳಾಗಿದೆ. ಒಂದು ಶತಮಾನದಿಂದ ಲಾಭನಷ್ಟದ ಪರಿವೆಯಿಲ್ಲದೆ ಭೂಮಿಯನ್ನು ಹಾಳುಮಾಡಲಾಗಿದೆ. ಹೀಗಾಗಿ ಪ್ರಕೃತಿ ಮಾತೆಯ ಮೈಮೇಲೆಲ್ಲ ಹುಣ್ಣಾಗಿದೆ. ಈ ಹುಣ್ಣನ್ನು ಶಮನಗೊಳಿಸಲು ಲಾಭನಷ್ಟದ ತುಲನೆ ಮಾಡುವ ಎಲ್ಲಾ ಕ್ಷೇತ್ರದ ಪರಿಣತರು ಬೇಕಾಗಿದ್ದಾರೆ. ಎಲ್ಲ ಶಾಲೆಗಳಲ್ಲಿ ಪರಿಸರ ಉತ್ಸವ ನಡೆದರೆ ಮುಂದಿನ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗುತ್ತದೆ' ಎಂದರು.
ವಿವಿಧ ಪರಿಸರ ಚಳವಳಿಗಳಲ್ಲಿ ಪಾಲ್ಗೊಂಡ ಪರಿಸರ ಹೋರಾಟಗಾರ್ತಿ ವಾಸಂತಿ ಹೆಗಡೆ ಅವರಿಗೆ ಸ್ವರ್ಣವಲ್ಲಿ ಶ್ರೀಗಳು ವೃಕ್ಷಲಕ್ಷ್ಯ ಪರಿಸರ ಪ್ರಶಸ್ತಿ ನೀಡಿ ಸನ್ಮಾನಿಸಿದರು. ನಂತರ ಮಾತನಾಡಿದ ಶ್ರೀಗಳು, `ಉತ್ತರ ಕನ್ನಡ ಜಿಲ್ಲೆ ಜಲವಿದ್ಯುತ್ ಯೋಜನೆ, ಅಣು, ಉಷ್ಣ ವಿದ್ಯುತ್ ಸ್ಥಾವರ ಹಾಗೂ ನದಿ ತಿರುವು ಎಂಬ ನಾಲ್ಕು ವಿಧದ ಪರಿಸರನಾಶಿ ಯೋಜನೆಗಳ ಭಯದ ನೆರಳಿನಲ್ಲಿದೆ. ಜನ ಜಾಗೃತರಾಗಿದ್ದರೆ ಪಶ್ಚಿಮಘಟ್ಟದಲ್ಲಿ ಯೋಜನೆ ರೂಪಿಸುವ ಹವಣಿಕೆ ಕಡಿಮೆಯಾಗಬಹುದು' ಎಂದರು.
ಧಾರವಾಡ ಆಕಾಶವಾಣಿ ನಿರ್ದೇಶಕ ಸಿ.ಯು.ಬೆಳ್ಳಕ್ಕಿ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ಪರಿಸರ ವಿಜ್ಞಾನಿಗಳಾದ ವಿ.ಎನ್.ನಾಯಕ, ಪ್ರೊ.ಆರ್. ವಾಸುದೇವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.