ADVERTISEMENT

ಪುತ್ರನಿಗೆ ಅಖಾಡ ಅಣಿಗೊಳಿಸಿರುವ ದೇಶಪಾಂಡೆ !

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 7:15 IST
Last Updated 20 ಮಾರ್ಚ್ 2014, 7:15 IST

ಶಿರಸಿ: ಕಾಂಗ್ರೆಸ್‌ ಪಕ್ಷಕ್ಕೆ ಕಗ್ಗಂಟಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ಅಭ್ಯರ್ಥಿ ಘೋಷಣೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ತಮ್ಮ ಪುತ್ರ ಪ್ರಶಾಂತ ದೇಶಪಾಂಡೆ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಕಾಂಗ್ರೆಸ್‌ನಿಂದ ಪ್ರಶಾಂತ ದೇಶಪಾಂಡೆ, ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ್‌ ಹೆಗಡೆ, ಜೆಡಿಎಸ್‌ನಿಂದ ಈ ಹಿಂದೆ ಬಿಜೆಪಿಯಲ್ಲಿದ್ದ ಪ್ರಬಲ ನಾಮಧಾರಿ ಸಮುದಾ ಯದ ಶಿವಾನಂದ ನಾಯ್ಕ ಸ್ಪರ್ಧಿಸಿದ್ದಾರೆ. ಇದರಿಂದ ಮೂವರು ಪ್ರಬಲ ವ್ಯಕ್ತಿಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ.

ಹಿರಿಯ ರಾಜಕಾರಣಿ ಆರ್‌.ವಿ. ದೇಶಪಾಂಡೆ ಅವರಿಗೆ ತಮ್ಮ ಪುತ್ರನಿಗೇ ಟಿಕೆಟ್‌ ದೊರೆಯಬಹುದೆಂಬ ನಿರೀಕ್ಷೆ ಇತ್ತೇ? ಕಳೆದು ಒಂದು ತಿಂಗಳಿನಿಂದ ದೇಶಪಾಂಡೆ ಲವಲವಿಕೆಯಿಂದ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸಿದ್ದನ್ನು ಗಮನಿಸಿದರೆ ಪ್ರಶಾಂತ ಅವರಿಗೆ ಟಿಕೆಟ್‌ ದೊರೆಯುವ ನಿರೀಕ್ಷೆ ಇತ್ತು ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಅಲ್ಲದೇ ಗುಪ್ತಚರ ವರದಿ ಸಹ ಪ್ರಶಾಂತ ಪರವಾಗಿ ಇದ್ದಿದ್ದು ಟಿಕೆಟ್‌ ಪಡೆಯಲು ಪೂರಕವಾಯಿತು ಎನ್ನುತ್ತವೆ ಮೂಲಗಳು.

ಅಸ್ತಿತ್ವದ ಪ್ರಶ್ನೆ: 1980ರಲ್ಲಿ ಜನತಾ ಪಕ್ಷ ಹಾಗೂ 1991ರಲ್ಲಿ ಜನತಾ ದಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ದೇಶಪಾಂಡೆ ಎರಡೂ ಬಾರಿ ದೇವರಾಯ ನಾಯ್ಕ (ಕಾಂಗ್ರೆಸ್‌) ಎದುರು ಪರಾಭವ ಗೊಂಡಿದ್ದರು. ಈಗ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಪಟ್ಟು ಹಿಡಿದು ಪುತ್ರನಿಗೆ ಟಿಕೆಟ್‌ ಕೊಡಿಸಿರುವ ದೇಶಪಾಂಡೆಗೆ ಇದು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿದೆ. ಒಂದೊಮ್ಮೆ ಪ್ರಶಾಂತ ಚುನಾವಣೆಯಲ್ಲಿ ಸೋಲು ಕಂಡರೆ ಅವರ ರಾಜಕೀಯ ಭವಿಷ್ಯ ಕಮರಿ ಹೋಗಲಿದೆ. ಅದಕ್ಕಾಗಿ ದೇಶಪಾಂಡೆ ಪುತ್ರನ ಗೆಲುವಿಗೆ ತಮ್ಮ ಮೂರು ದಶಕಗಳ ರಾಜಕೀಯ ಅನುಭವವನ್ನು ಪ್ರಯೋಗಿಸುವ ಸಾಧ್ಯತೆ ಇದೆ.

‘ಈ ಬಾರಿ ಚುನಾವಣೆಯಲ್ಲಿ ಮಗನನ್ನು ಕಣಕ್ಕಿಳಿಸಲು ದೇಶಪಾಂಡೆ ಆರು ತಿಂಗಳ ಹಿಂದೆಯೇ ರಣತಂತ್ರ ಹೂಡಿದ್ದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಉತ್ಸವಗಳ ಮೂಲಕ ವ್ಯವಸ್ಥಿತವಾಗಿ ಜನರನ್ನು ಸಂಘಟಿಸುವ, ತರಾತುರಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ಚಾಲನೆ ನೀಡುವ ದೇಶಪಾಂಡೆ ಕಾರ್ಯವೈಖರಿ ಕಂಡಾಗ ಪ್ರಶಾಂತ ಅವರಿಗೆ ಟಿಕೆಟ್‌ ಸಿಗುವುದು ಖಾತ್ರಿಯಾಗಿತ್ತು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು.

‘ಅನೇಕ ವರ್ಷಗಳಿಂದ ನನೆಗುದಿಯಲ್ಲಿದ್ದ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ದೇಶಪಾಂಡೆ  ಶ್ರಮವಹಿಸಿ, ಬುಡಕಟ್ಟು ಮತ್ತು ಇತರೇ ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕು ಮಾನ್ಯತಾ ಕಾಯ್ದೆ ಅಡಿಯಲ್ಲಿ ಒಂದಿಷ್ಟು ಮಂದಿಗೆ ಹಕ್ಕುಪತ್ರ ವಿತರಣೆಯನ್ನೂ ಕೆಲವೇ ದಿನಗಳ ಹಿಂದೆ ಮಾಡಿದ್ದಾರೆ. ಆ ಮೂಲಕ ಅರಣ್ಯ ಅತಿಕ್ರಮಣದಾರರ ಮನಗೆಲ್ಲಲು ಸಹ ದೇಶಪಾಂಡೆ ಪ್ರಯತ್ನಿಸಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ದೇಶಪಾಂಡೆ ಅವರ ಅಂತರಂಗದ ಗುಟ್ಟನ್ನು ಹೇಳಿದರು.

ಆಳ್ವಾ ಬಣದ ನಿಲುವು ಏನು? : ಕಾಂಗ್ರೆಸ್‌ ಪಕ್ಷದಲ್ಲಿ ಪ್ರಭಾವಿಯಾಗಿದ್ದ ಪ್ರಸ್ತುತ ರಾಜಸ್ತಾನದ ರಾಜ್ಯಪಾಲೆ ಆಗಿರುವ ಮಾರ್ಗರೆಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವ ಸಹ ಪ್ರಬಲ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ನಿವೇದಿತ್‌ ಅವರಿಗೆ ಟಿಕೆಟ್‌ ದೊರೆತಿಲ್ಲವೆಂದು ಅಸಮಾ ಧಾನಗೊಂಡಿರುವ ಆಳ್ವ ಬಣ ಭಿನ್ನಾಭಿಪ್ರಾಯ ಬದಿಗೊತ್ತಿ ಪ್ರಶಾಂತ ದೇಶಪಾಂಡೆ ಬೆಂಬಲಿಸಬಹುದೇ ಎಂಬುದು ಪ್ರಶ್ನೆಯಾಗಿದೆ. ರಾಜಕೀಯ ಭವಿಷ್ಯ ಪಣಕ್ಕಿಟ್ಟಿರುವ ದೇಶಪಾಂಡೆ ಈಗ ಆಳ್ವ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬಹುದೇ?

ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ ವಿರುದ್ಧ ಪಕ್ಷದ ಕೆಲವು ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ. ಆದರೆ ನರೇಂದ್ರ ಮೋದಿ ಅಲೆಯಲ್ಲಿ ಕಾರ್ಯಕರ್ತರು ಅಸಮಾ ಧಾನ ಮರೆತು ಕೆಲಸ ಮಾಡಬಹುದಾಗಿದ್ದು, ಅದೇ ರೀತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಹ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಬದ್ಧರಾಗುವರೇ ಎಂಬುದನ್ನು ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.