ADVERTISEMENT

ಪ್ರಥಮ ಗ್ರಾಮೀಣ ಪದವಿ ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 31 ಮೇ 2012, 6:45 IST
Last Updated 31 ಮೇ 2012, 6:45 IST
ಪ್ರಥಮ ಗ್ರಾಮೀಣ ಪದವಿ ಕಾಲೇಜು ಆರಂಭ
ಪ್ರಥಮ ಗ್ರಾಮೀಣ ಪದವಿ ಕಾಲೇಜು ಆರಂಭ   

ಶಿರಸಿ: ಗ್ರಾಮೀಣ ಭಾಗದಲ್ಲಿ ಅಕ್ಷರ ದಾಸೋಹ ನೀಡುತ್ತಿರುವ ಯಡಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿಗೆ ಪದವಿ ವಿಭಾಗ ಪ್ರಾರಂಭಿಸಿದ ಹೆಗ್ಗಳಿಕೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೊದಲು ಡಿಗ್ರಿ ಕಾಲೇಜ್ ಹೊಂದಿದ ಕೀರ್ತಿಗೆ ಯಡಳ್ಳಿ ಕಾಲೇಜ್ ಪಾತ್ರವಾಗಿದೆ.

ಕಾಲೇಜಿನ ಪ್ರಮುಖರು ಬುಧವಾರ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದರು. 1955ರಲ್ಲಿ ವಿದ್ಯೋದಯ ಪ್ರೌಢಶಾಲಾ ವಿಭಾಗ ಆರಂಭಿಸಿದಾಗ ಸ್ಥಳೀಯ ಅನೇಕ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಅನ್ನದಾನ, ಸ್ಥಳದಾನ ಮಾಡಿದರು.
 
ಪ್ರೌಢಶಾಲೆ 1972ರಲ್ಲಿ ಪದವಿಪೂರ್ವ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿತು. ಕಲಾ ಮತ್ತು ವಾಣಿಜ್ಯ ವಿಭಾಗ ಹೊಂದಿರುವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಸತಿಗೃಹ, ವಾಚನಾಲಯ, ಕಂಪ್ಯೂಟರ್ ವಿಭಾಗ ಸೇರಿದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವ ಎಲ್ಲ ರೀತಿಯ ಸೌಲಭ್ಯಗಳಿವೆ.
 
ಶಿಕ್ಷಣ ಇಲಾಖೆಯಿಂದ ಎ ಮಾನತ್ಯೆ ಪಡೆದಿರುವ ಕಾಲೇಜಿನಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜ್ ವಿಭಾಗದಲ್ಲಿ ಶೇಕಡಾ ನೂರರ ಸಾಧನೆಯಾಗಿರುವುದು ಮಹತ್ವದ ಸಂಗತಿಯಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಮೊದಲ ವರ್ಷದ ವಾಣಿಜ್ಯ ಪದವಿ ವಿಭಾಗಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಅನುಮತಿ ನೀಡಿದೆ. ಕನ್ನಡ, ಇಂಗ್ಲೀಷ್ ಜೊತೆಗೆ ಫೈನಾನ್ಶಿಯಲ್ ಅಕೌಂಟ್, ಪ್ರಿನ್ಸಿಪಲ್ ಮ್ಯಾನೇಜ್‌ಮೆಂಟ್, ಬಿಜನೆಸ್ ಎನ್‌ವಾಯರಾನ್‌ಮೆಂಟ್, ಮ್ಯಾನೇಜರಿಯಲ್ ಇಕಾನಮಿಕ್ಸ್ ಹಾಗೂ ಭಾರತದ ಸಂವಿಧಾನ ವಿಷಯಗಳನ್ನು ಪ್ರಥಮ ವರ್ಷದ ವಾಣಿಜ್ಯ ಪದವಿಗೆ ನೀಡಲಾಗಿದೆ.
 
ವಿದ್ಯಾರ್ಥಿಗಳಿಗೆ ಅರ್ಜಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜೂ.19 ಅರ್ಜಿ ನೀಡಲು ಕೊನೆಯ ದಿನಾಂಕವಾಗಿದೆ. ಪ್ರಥಮ ವರ್ಷದ ವಾಣಿಜ್ಯ ಪದವಿಗೆ 60 ವಿದ್ಯಾರ್ಥಿಗಳಿಗೆ ಅವಕಾಶವಿದೆ.
 
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ ಸಾಧ್ಯವಿದ್ದಷ್ಟು ಪದವಿ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಲಾಗುತ್ತದೆ. ಪದವಿ ಕಾಲೇಜ್‌ಗೆ ಏಳು ಪ್ರಾಧ್ಯಾಪಕರನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ.
 
ಮುಂದಿನ ವರ್ಷದಿಂದ ಪದವಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು  ಉಪಾಧ್ಯಕ್ಷ ಎಂ.ಎನ್.ಹೆಗಡೆ ಹೇಳಿ ದರು. ಆಡಳಿತ ಸಮಿತಿಯ ಕಾರ್ಯದರ್ಶಿ ಎಂ.ವಿ.ಹೆಗಡೆ, ಸದಸ್ಯರಾದ ಎಂ.ಜಿ. ಭಾಗ್ವತ, ಪರಮೇಶ್ವರ ಹೆಗಡೆ, ಪ್ರಾಚಾರ್ಯ ಬಿ.ಬಿ.ಕುಂದರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.