ADVERTISEMENT

ಫಲಿತಾಂಶಕ್ಕೆ ಅಭ್ಯರ್ಥಿಗಳ ಮಾನಸಿಕ ಸಿದ್ಧತೆ

ಅಡುಗೆ ಮನೆಯಲ್ಲಿ ಸಹಕರಿಸಿದ ಸತೀಶ್ ಸೈಲ್, ಗೋವಾಕ್ಕೆ ತೆರಳಿದ ಆನಂದ ಅಸ್ನೋಟಿಕರ್

​ಪ್ರಜಾವಾಣಿ ವಾರ್ತೆ
Published 14 ಮೇ 2018, 10:55 IST
Last Updated 14 ಮೇ 2018, 10:55 IST

ಕಾರವಾರ: ವಿಧಾನಸಭೆ ಚುನಾವಣೆಗಾಗಿ ತಮ್ಮ ಕ್ಷೇತ್ರಗಳಲ್ಲಿ ಎಡೆಬಿಡದೆ ಸುತ್ತಾಡಿ ಬಳಲಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ತುಸು ವಿರಾಮ ಪಡೆದದರು. ಇದೇ 15ರಂದು ಮತ ಎಣಿಕೆ ನಡೆಯಲಿದ್ದು, ಆ ಒತ್ತಡವನ್ನು ಸಹಿಸಿಕೊಳ್ಳಲು ಮಾನಸಿಕ ಸಿದ್ಧತೆ ಮಾಡಿಕೊಂಡರು.

ಅಡುಗೆಗೆ ಸಹಕರಿಸಿದ ಸತೀಶ್ ಸೈಲ್: ಕಾರವಾರ– ಅಂಕೋಲಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರು ಸದಾಶಿವಗಡದ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರ ಜತೆ ಕಾಲ ಕಳೆದರು. ಬೆಳಿಗ್ಗೆ ಎಂದಿನಂತೆ ದಿನಚರಿ ಆರಂಭಿಸಿದ ಅವರು, ಪತ್ನಿ ಕಲ್ಪನಾ ಸೈಲ್ ಅವರಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡಿದರು. ಖುದ್ದು ಚಹಾ ಸಿದ್ಧಪಡಿಸಿ ಸವಿದ ಬಳಿಕ, ಮಧ್ಯಾಹ್ನದ ಅಡುಗೆ ಮಾಡಲು ಸಹಕರಿಸಿದರು. ಬಳಿಕ ಮಕ್ಕಳು, ತಾಯಿ ಜತೆ ಹರಟೆ ಹೊಡೆದು ಮನಸ್ಸನ್ನು ತುಸು ಹಗುರವಾಗಿಸಿಕೊಂಡರು.

ಗೋವಾದಲ್ಲಿ ಆನಂದ ಅಸ್ನೋಟಿಕರ್: ಈ ಕ್ಷೇತ್ರದಲ್ಲಿ ಉಳಿದೆಲ್ಲ ಅಭ್ಯರ್ಥಿಗಳಿಗಿಂತ ಮೊದಲು ಚುನಾವಣಾ ಪ್ರಚಾರ ಆರಂಭಿಸಿದವರು ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್. ಅವರು ಮತದಾನ ಮುಗಿಯುತ್ತಿದ್ದಂತೆ ಗೋವಾದತ್ತ ಪ್ರಯಾಣ ಬೆಳೆಸಿದರು. ಚುನಾವಣೆಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಆರು ತಿಂಗಳಿನಿಂದ ತಮ್ಮ ವ್ಯವಹಾರಗಳ ಸೂಕ್ತ ಉಸ್ತುವಾರಿಗೆ ಅವರಿಗೆ ಸಮಯಾವಕಾಶ ಇರಲಿಲ್ಲ. ಆದ್ದರಿಂದ ಅವುಗಳನ್ನು ಪರಿಶೀಲನೆ ಮಾಡುವ ಸಲುವಾಗಿ ತೆರಳಿದ್ದಾರೆ ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಂಪರ್ಕಕ್ಕೆ ಸಿಗದ ರೂಪಾಲಿ ನಾಯ್ಕ: ಬಿರುಬಿಸಿಲಿನ ನಡುವೆಯೇ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಕೈಗೊಂಡು ಬಳಲಿದಂತೆ ಕಂಡುಬಂದಿದ್ದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಭಾನುವಾರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ‘ಅವರು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯಿದೆ’ ಎಂದು ಪಕ್ಷದ ಮುಖಂಡರು ಹೇಳಿದರು.

ದಿನಸಿ ಖರೀದಿಸಿದ ಮಾಧವ ನಾಯಕ: ಎನ್‌ಸಿಪಿ ಅಭ್ಯರ್ಥಿ ಮಾಧವ ನಾಯಕ ಮಾತ್ರ ಪ್ರತಿವಾರದಂತೆ ಈ ಭಾನುವಾರವೂ ಬೆಳಿಗ್ಗೆಯೇ ಸಂತೆ ಸುತ್ತಾಡಿದರು. ಮನೆಗೆ ತರಕಾರಿ, ಮೀನು, ದಿನಸಿ ಖರೀದಿಸಿದರು.

ಕುಮಟಾದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಬೆಳಿಗ್ಗೆ ಆರು ಗಂಟೆಗೇ ಕಾರ್ಯಕರ್ತರನ್ನು ಭೇಟಿ ಮಾಡಿದರು. ನಂತರ, ಕ್ಷೇತ್ರದ ವಿವಿಧೆಡೆ ನಾಲ್ಕು ಮದುವೆಗಳಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಅವರೂ ಮನೆಯಲ್ಲೇ ಇದ್ದುಕೊಂಡು ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು.

ಮದುವೆ ಮನೆಯಲ್ಲಿ ಸುನೀಲ ನಾಯ್ಕ

ಭಟ್ಕಳ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿದ್ದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಚುನಾವಣಾ ಓಡಾಟದಿಂದ ಬಳಲಿದಂತೆ ಕಂಡರೂ ಭಾನುವಾರ ಬೆಳಿಗ್ಗೆ 8ಗಂಟೆಗೆ ಎದ್ದರು.

ಅದಾಗಲೇ ಮನೆಯ ಮುಂದೆ ಸೇರಿದ್ದ ಕಾರ್ಯಕರ್ತರು, ಪಕ್ಷದ ಮುಖಂಡರೊಂದಿಗೆ  ಚರ್ಚಿಸಿದರು. ನಂತರ ಕುಟುಂಬ ಸಮೇತ ತಮ್ಮ ಸಹೋದರ ಮಾವ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರೂ ಆದ ದಾಮೋದರ ಗರ್ಡೀಕರ್ ಅವರ ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಮಂಕಾಳ ವೈದ್ಯ, ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಲ್ಲೇ ಉಳಿದುಕೊಂಡರು. ಕಾರ್ಯಕರ್ತರು, ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ, ಹರಟೆಯಲ್ಲಿ ಕಾಲ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.