ADVERTISEMENT

`ಫ್ಲೆಕ್ಸಿ ಪ್ಯಾಕ್ ಘಟಕಕ್ಕೆ ರೂ.12 ಕೋಟಿ ಪ್ರಸ್ತಾವ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:02 IST
Last Updated 4 ಸೆಪ್ಟೆಂಬರ್ 2013, 10:02 IST

ಶಿರಸಿ: `ಹಾವೇರಿ ಜಿಲ್ಲೆಯಲ್ಲಿ ಫ್ಲೆಕ್ಸಿ ಪ್ಯಾಕ್ ಘಟಕ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ 12 ಕೋಟಿ ರೂಪಾಯಿ ಪ್ರಸ್ತಾವ ಸಲ್ಲಿಸಲಾಗಿದೆ. ಈ ಘಟಕ ಪ್ರಾರಂಭಿಸಿದರೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರಸ್ತುತ ಪೂರೈಕೆ ಮಾಡುತ್ತಿರುವ ಹಾಲಿನ ಪೌಡರ್ ಬದಲಾಗಿ 150ಮಿಲಿ ಲೀಟರ್‌ನ ಫ್ಲೆಕ್ಸಿ ಪ್ಯಾಕ್ ಘಟಕ ಪೂರೈಸಲು ಸಾಧ್ಯವಾಗುತ್ತದೆ' ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

ನಗರದ ಆದರ್ಶ ವನಿತಾ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ಒಕ್ಕೂಟದ ಪ್ರಾದೇಶಿಕ ಸಭೆಯ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  `ಧಾರವಾಡ ಒಕ್ಕೂಟ ವ್ಯಾಪ್ತಿಯ ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳ ಒಟ್ಟು 5768 ಶಾಲೆಗಳ 7.56ಲಕ್ಷ ಮಕ್ಕಳಿಗೆ ಆಗಸ್ಟ್ ತಿಂಗಳಿನಲ್ಲಿ 145 ಟನ್ ಹಾಲಿನ ಪೌಡರ್ ಪೂರೈಕೆ ಮಾಡಲಾಗಿದೆ.

170ಟನ್ ಬೇಡಿಕೆ ಇದ್ದು, ಕಾರಣಾಂತರದಿಂದ ಧಾರವಾಡದಲ್ಲಿ ತುಸು ತೊಂದರೆಯಾಗಿದ್ದನ್ನು ಹೊರತುಪಡಿಸಿದರೆ ಶೇ 90ರಷ್ಟು ಗುರಿ ಸಾಧನೆಯಾಗಿದೆ. 7166 ಅಂಗನವಾಡಿಗಳ 4 ಲಕ್ಷ ಮಕ್ಕಳಿಗೆ 108ಟನ್ ಹಾಲಿನ ಪೌಡರ್ ಒದಗಿಸಲಾಗಿದೆ' ಎಂದರು.

`ಇದೇ ತಿಂಗಳಿನಲ್ಲಿ ಶಾಲೆಗಳಿಂದ 148 ಟನ್ ಬೇಡಿಕೆ ಬಂದಿದ್ದು, ಈವರೆಗೆ 20 ಟನ್ ಪೂರೈಕೆ ಮಾಡಲಾಗಿದೆ. ಅಂಗನವಾಡಿಗಳಿಂದ 96 ಟನ್ ಬೇಡಿಕೆ ಇದ್ದು, 58 ಟನ್ ಒದಗಿಸಲಾಗಿದೆ. ಇನ್ನುಳಿದವನ್ನು ಒಂದು ವಾರದ ಒಳಗಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು' ಎಂದರು.

`ಪ್ರತಿದಿನದ ಹಾಲು ಉತ್ಪಾದನೆಯಲ್ಲಿ 85 ಸಾವಿರ ಲೀಟರ್ ಹಾಲು ಮಾರಾಟ, ಉಪ ಉತ್ಪನ್ನ ತಯಾರಿಕೆ ಹೊರತುಪಡಿಸಿ ಉಳಿದ 60-65ಸಾವಿರ ಲೀಟರ್ ಹಾಲನ್ನು ಹಾಲಿನ ಪೌಡರ್‌ಗೆ ಬಳಸಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇರುವುದರಿಂದ ಪೌಡರ್ ಸಿದ್ಧತೆಗೆ ಹಾಲಿನ ಕೊರತೆ ಇಲ್ಲ' ಎಂದರು.

ಜಿಲ್ಲೆಯಲ್ಲಿ ಗಣನೀಯ ಏರಿಕೆ: `ಉತ್ತರ ಕನ್ನಡ ಜಿಲ್ಲೆಯಲ್ಲಿ 2007-08ನೇ ಸಾಲಿನಲ್ಲಿ 81 ಹಾಲು ಉತ್ಪಾದಕ ಸಂಘಗಳಿದ್ದು, ಪ್ರಸ್ತುತ 150 ಸಂಘಗಳಿಗೆ ಏರಿಕೆಯಾಗಿದೆ. ಪ್ರತಿದಿನ 27,845 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಹಾಲಿನ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯಲ್ಲಿ ಪ್ಯಾಕಿಂಗ್ ಘಟಕ ಸ್ಥಾಪನೆ ಕುರಿತಂತೆ ಸರ್ಕಾರಕ್ಕೆ ಸಲ್ಲಿಸಿರುವ ್ಙ 3.5ಕೋಟಿ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಸರ್ಕಾರದಿಂದ ರೈತರಿಗೆ ಸಿಗಬೇಕಾಗಿದ್ದ ಜನವರಿಯಿಂದ ಜೂನ್ ವರೆಗಿನ ಸಹಾಯಧನದ ಬಾಕಿ ಮೊತ್ತ ರೂ 5.40 ಕೋಟಿ ಒಕ್ಕೂಟಕ್ಕೆ ಬಿಡುಗಡೆಯಾಗಿದೆ. ಹಾಲು ಉತ್ಪಾದಕ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡಲಾಗುವುದು' ಎಂದರು. ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಸುರೇಶ ನಾಯ್ಕ, ಅಧಿಕಾರಿಗಳಾದ ಶಿವಾನಂದ ಆಲೂರ, ಡಾ.ವೀರೇಶ ತರಲಿ, ಆರ್.ಎಸ್.ಹೆಗಡೆ, ನಿರ್ದೇಶಕರಾದ ಶಂಭುಲಿಂಗ ಹೆಗಡೆ, ಮಧುಕೇಶ್ವರ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.