ADVERTISEMENT

ಬಬಲೇಶ್ವರದಲ್ಲಿ ಶೀಘ್ರ ಬೃಹತ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:30 IST
Last Updated 9 ಅಕ್ಟೋಬರ್ 2012, 9:30 IST

ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲಸಂಗಮ ಪೀಠಗಳನ್ನು ವಿಲೀನಗೊಳಿಸುವ ಮೊದಲ ಹೆಜ್ಜೆಯಾಗಿ ಅಕ್ಟೋಬರ್ ಕೊನೆಯ ವಾರದಲ್ಲಿ ವಿಜಾಪುರ ಜಿಲ್ಲೆಯ ಬಬಲೇಶ್ವರದಲ್ಲಿ ಬೃಹತ್ ಸಮಾವೇಶ ನಡೆಸಲು ಭಾನುವಾರ ಇಲ್ಲಿನ ಕೇಶ್ವಾಪುರದಲ್ಲಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಾವೇಶದಲ್ಲಿ ಇಬ್ಬರೂ ಶ್ರೀಗಳು ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಮೂಲಕ ಸಮಾಜದ ಒಗ್ಗಟ್ಟಿನ ಮಂತ್ರಕ್ಕೆ ಚಾಲನೆ ನೀಡುವುದು ಹಾಗೂ ಸಭೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ನಿರ್ಧರಿಸಲಾಯಿತು.

ಮಧ್ಯಸ್ಥಿಕೆ ಸಮಿತಿ: ಎರಡೂ ಮಠಗಳನ್ನು ಒಂದುಗೂಡಿಸಲು ಸಮಾಜದ ಮುಖಂಡರು ಹಾಗೂ ಹಿರಿಯರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಲು ಹಾಗೂ ಹಾಲಿ ಇರುವ ಎರಡೂ ಪೀಠಗಳ ಸಮಿತಿಗಳನ್ನು ವಿಸರ್ಜಿಸಲು ಸಭೆ ಒಪ್ಪಿಗೆ ನೀಡಿತು.

ಎರಡೂ ಪೀಠಗಳನ್ನು ಒಗ್ಗೂಡಿಸಿ ಹೊಸ ಟ್ರಸ್ಟ್ ರಚಿಸುವುದು ಹಾಗೂ ಮಧ್ಯಸ್ಥಿಕೆ ಸಮಿತಿಯ ನೇತೃತ್ವ ವಹಿಸಬೇಕಾದವರು ಹಾಗೂ ಅದರ ರೂಪು ರೇಷೆಗಳನ್ನು ಮುಂದಿನ ವಾರ ಬೆಂಗಳೂರಿನಲ್ಲಿ ನಿರಾಣಿ ಅವರ ಮನೆಯಲ್ಲಿ ಮತ್ತೊಂದು ಸಭೆ ಕರೆದು ಅಂತಿಮಗೊಳಿಸಲು ಸಭೆ ಒಪ್ಪಿಗೆ ನೀಡಿತು.

ಇನ್ನು ಮುಂದೆ ವೀರಶೈವ ಅಥವಾ ಲಿಂಗಾಯಿತ ಎಂಬ ಭೇದವಿಲ್ಲ. ರಾಜ್ಯದಲ್ಲಿರುವ ಪಂಚಮಸಾಲಿ ಸಮಾಜದ 75 ಲಕ್ಷ ಜನರನ್ನು ಒಂದೇ ವೇದಿಕೆಗೆ ತಂದು ಮುಂದಿನ ದಿನಗಳಲ್ಲಿ ಹರಿಹರ ಹಾಗೂ ಕೂಡಲಸಂಗಮ ಪೀಠಗಳೊಂದಿಗೆ ಅಗತ್ಯ ಬಿದ್ದಲ್ಲಿ ಗುಲ್ಬರ್ಗ ಹಾಗೂ ಬಳ್ಳಾರಿ ಭಾಗದಲ್ಲಿ ಇನ್ನೂ ಎರಡು ಪೀಠಗಳನ್ನು ರಚಿಸಲು ನಿರ್ಧರಿಸಲಾಯಿತು.

ಸಮಾಜದ ವಿಲೀನಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ಆಯೋಜಿಸುವುದು ಸೇರಿದಂತೆ ಯಾವುದೇ ತೀರ್ಮಾನ ಕೈಗೊಳ್ಳಲು ಸಚಿವ ಮುರುಗೇಶ ನಿರಾಣಿ ಅವರಿಗೆ ಅಧಿಕಾರ ನೀಡಲು ಸಭೆ ತೀರ್ಮಾನಿಸಿತು.

ಹರಿಹರ ವೀರಶೈವ ಪಂಚಮಸಾಲಿ ಪೀಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಬಲೇಶ್ವರದ ಗುರುಪಾದೇಶ್ವರ ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಪಿ.ಸಿ.ಸಿದ್ದನ ಗೌಡ್ರು, ಶಾಸಕ ಶ್ರೀಶೈಲಪ್ಪ ಬಿದರೂರು, ಬಾವಿ ಬೆಟ್ಟಪ್ಪ, ಪ್ರಭಣ್ಣ ಹುಣಸಿಕಟ್ಟಿ, ವಿ.ಎಸ್.ಪಾಟೀಲ, ನೀಲಕಂಠ ಅಸೂಟಿ, ರಾಜಶೇಖರ ಮೆಣಸಿನಕಾಯಿ, ಜಿ.ಪಿ. ಪಾಟೀಲ ಹಾಜರಿದ್ದರು.

ಅಭ್ಯಂತರವಿಲ್ಲ
`ಭಿನ್ನಾಭಿಪ್ರಾಯ ಮರೆತು ಸಮಾಜ ಒಂದು ಗೂಡುವುದು ಭಕ್ತರ ಆಶಯ ವಾದರೆ ನಮ್ಮದೇನೂ ಅಭ್ಯಂತರವಿಲ್ಲ. ವಿಲೀನದ ನಂತರ ಕೂಡಲಸಂಗಮ ಹಾಗೂ ಹರಿಹರ ಎರಡೂ ಜಗದ್ಗುರು ಪೀಠ ಗಳಾಗಿರುವುದರಿಂದ ಎರಡೂ ಸಮಾನ ಸ್ಥಾನ ಪಡೆಯಲಿವೆ. ಮೇಲು-ಕೀಳು ಪ್ರಶ್ನೆಯೇ ಇಲ್ಲ. ಭಕ್ತರ ಸಂತಸವೇ ನಮ್ಮ ಇಚ್ಛೆ~...
-ಬಸವಜಯಮೃತ್ಯಂಜಯ ಸ್ವಾಮೀಜಿ

ಒಗ್ಗೂಡುವುದು ಸಮ್ಮತ
`ಜಗಳವಾಡಿದ್ದು ಸ್ವಾಮೀಜಿ ಗಳಲ್ಲ. ನಾವು ಯಾವಾಗಲೂ ಒಂದಾಗಿದ್ದೇವೆ. ಸಮಿತಿಯವರು ಭಿನ್ನಾಭಿಪ್ರಾಯದಿಂದ ಎರಡು ಪೀಠ ಮಾಡಿಕೊಂಡಿದ್ದಾರೆ.

ಅವರು ಒಂದುಗೂಡಿ ಒಂದು ಪೀಠ ಮಾಡುವುದಾದರೆ ನಮ್ಮದೇನೂ ತಕರಾರಿಲ್ಲ. ಎರಡೂ ಪೀಠಗಳನ್ನು ಒಗ್ಗೂಡಿಸಲು ಸಮಿತಿ ರಚಿಸಿ ಎಂದು ಭಾನುವಾರದ ಸಭೆಯಲ್ಲಿ ಸಲಹೆ ನೀಡಿದ್ದೇನೆ. ಅದು ಶೀಘ್ರ ಕಾರ್ಯಗತಗೊಳ್ಳಲಿದೆ.~
-ಡಾ.ಸಿದ್ಧಲಿಂಗಸ್ವಾಮೀಜಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.