ADVERTISEMENT

ಬಿಸಿಲ ಝಳ; ಕಲ್ಲಂಗಡಿಗೆ ಬಂತು ಬೇಡಿಕೆ

ಪಿ.ಕೆ.ರವಿಕುಮಾರ
Published 16 ಡಿಸೆಂಬರ್ 2013, 6:22 IST
Last Updated 16 ಡಿಸೆಂಬರ್ 2013, 6:22 IST
ಕಾರವಾರದ ಶಿವಾಜಿ ಉದ್ಯಾನದ ಬಳಿ ಕಲ್ಲಂಗಡಿ ಹಣ್ಣಿನ ಖರೀದಿಯಲ್ಲಿ ತೊಡಗಿರುವ ಗ್ರಾಹಕರು
ಕಾರವಾರದ ಶಿವಾಜಿ ಉದ್ಯಾನದ ಬಳಿ ಕಲ್ಲಂಗಡಿ ಹಣ್ಣಿನ ಖರೀದಿಯಲ್ಲಿ ತೊಡಗಿರುವ ಗ್ರಾಹಕರು   

ಕಾರವಾರ: ಇಲ್ಲಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಬೆಳಿಗ್ಗೆಯಿಂದ ಸಂಜೆವರೆಗೆ ಬಿಸಿಲು ಚುರುಗುಟ್ಟುತ್ತಿದೆ. ಬಾಯಾ ರಿಕೆ ನೀಗಿಸಲು ನಾಗರಿಕರು ಕಲ್ಲಂಗಡಿ, ಕರಬೂಜ ದಂತಹ ಹಣ್ಣುಗಳಿಗೆ ಮೊರೆ ಹೋಗುತ್ತಿದ್ದಾರೆ.

ವಾರದ ಸಂತೆ ದಿನವಾದ ಭಾನುವಾರ ರಸ್ತೆಬದಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಕಲ್ಲಂಗಡಿ, ಕರಬೂಜ ಹಣ್ಣುಗಳಿಗೆ ಭಾರಿ ಬೇಡಿಕೆ ಕಂಡುಬಂತು. ಹಣ್ಣುಗಳ ರಾಶಿ ಕಣ್ಣಿಗೆ ಬೀಳುತ್ತಿದ್ದಂತೆ ತಮ್ಮ ವಾಹನಗಳನ್ನು ನಿಲ್ಲಿಸಿ ಹಣ್ಣುಗಳನ್ನು ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಾರವಾರ ನಗರವು ಕಡಲತೀರವನ್ನು ಹೊಂದಿಕೊಂಡಂತೆ ಇರುವುದರಿಂದ ಇಲ್ಲಿ ಸದಾ ಬಿಸಿಲಿನ ಝಳ ಹೆಚ್ಚಾಗಿರುತ್ತದೆ. ತಾಜಾ ಹಣ್ಣುಗಳು ಹಾಗೂ ಅದರ ಪಾನೀಯ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಹಾಗೂ ದಾಹ ತಣಿಸಲು ಎಲ್ಲರೂ ಹಣ್ಣುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು.

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿದೆ. ಈ ಹಣ್ಣು ಹಿಂದೆ ಮಾರ್ಚ್‌– ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈಗ ಈ ಹಣ್ಣನ್ನು ಎಲ್ಲ ಕಾಲದಲ್ಲೂ ಬೆಳೆಯಲಾಗುತ್ತದೆ. ‘ಕಿರಣ’, ‘ನಾಮಧಾರ್‌’ ತಳಿಗಳು ಮಾರುಕಟ್ಟೆಯಲ್ಲಿವೆ. ಗಾತ್ರಕ್ಕೆ ತಕ್ಕಂತೆ ಒಂದು ಹಣ್ಣಿನ ದರ ₨ 25, ₨ 30 ಇದೆ. ಅಂಕೋಲಾ, ಕಾರವಾರ ತಾಲ್ಲೂಕಿನ ಬಿಣಗಾ, ಅಮದಳ್ಳಿ, ಆವರ್ಸಾ, ಸಿದ್ದರ, ಕಿನ್ನರ ಗ್ರಾಮಗಳಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 

‘ಕಲ್ಲಂಗಡಿ ಹಣ್ಣುಗಳನ್ನು ಹುಬ್ಬಳ್ಳಿಯಿಂದ ಮಾರಾಟಕ್ಕೆ ತರಲಾಗಿದೆ. ಈ ಹಣ್ಣುಗಳನ್ನು ಆಂಧ್ರಪ್ರದೇಶದ ಅನಂತಪುರ, ಕಾಡಪತ್ರಿ ಭಾಗದಲ್ಲಿ ಬೆಳೆಯಲಾಗಿದ್ದು, ಅಲ್ಲಿಂದ ಈ ಹಣ್ಣು ಹುಬ್ಬಳ್ಳಿಗೆ ಬಂದಿವೆ. ಇಲ್ಲಿ ಪ್ರತಿ ವಾರದ ಸಂತೆಗೆ ಬರುತ್ತೇವೆ. ದಿನಕ್ಕೆ ಸುಮಾರು 500 ಹಣ್ಣುಗಳು ಮಾರಾಟವಾಗುತ್ತವೆ. ಖರ್ಚು, ವೆಚ್ಚ ಎಲ್ಲ ಕಳೆದು ಸುಮಾರು ₨ 1,000 ಲಾಭ ಸಿಗುತ್ತದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಬಶೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.