ADVERTISEMENT

ಬೃಹತ್ ಜೇನುಮರಗಳ ರಕ್ಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:05 IST
Last Updated 5 ಫೆಬ್ರುವರಿ 2011, 7:05 IST

ಶಿರಸಿ: ತಾಲ್ಲೂಕಿನ ವಾನಳ್ಳಿ ಕೊಕ್ಕಳ್ಳಿ ಸಮೀಪದ ಶಮೆಮನೆಯ ದೊಣ್ಣೆ ಕಾನಿನಲ್ಲಿರುವ ಎರಡು ಬೃಹತ್ ಜೇನುಮರಗಳನ್ನು ರಾಷ್ಟ್ರೀಯ ಸ್ಮಾರಕ ಮಾದರಿಯಲ್ಲಿ ಸಂರಕ್ಷಿಸಬೇಕು ಎಂದು ಪರಿಸರವಾದಿ, ಪರಿಸರ ಸಂರಕ್ಷಣಾ ಕೇಂದ್ರದ ಪಾಂಡುರಂಗ ಹೆಗಡೆ ಒತ್ತಾಯಿಸಿದ್ದಾರೆ. ನಗರದ ಆರಾಧನಾ ಸಭಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವರ್ಷ ಜೇನುತುಪ್ಪ ಸಂಗ್ರಹಿಸುವ ಮುಂಚೆ ಜೇನುಗೂಡುಗಳನ್ನು ಹಾಳು ಮಾಡಲಾಗಿದೆ. ಪರಿಣಾಮವಾಗಿ ಕೋಟ್ಯಂತರ ಜೇನು ಮರಿಗಳು ನಾಶವಾಗಿ ಪರಾಗಸ್ಪರ್ಶ ಕುಂಠಿತವಾಗಿದೆ ಎಂದು ಅವರು ಆರೋಪಿಸಿದರು.

ಈ ಕಾಡಿನಲ್ಲಿ ಗುರಿಗೆ ಹೂವು ಅರಳಿದಾಗ ಜೇನುಮರಗಳ ಪ್ರತಿ ಕೊಂಬೆಗೂ ಜೇನು ಗೂಡು ಕಟ್ಟುತ್ತದೆ. ಪ್ರತಿ ಒಂಬತ್ತು ವರ್ಷಕ್ಕೊಮ್ಮೆ ಗುರಿಗೆ ಹೂವು ಅರಳಿದಾಗ ಬಿಳಿಸಾರಿ ಜಾತಿಗೆ ಸೇರಿದ ಮರಕ್ಕೆ ಮಾತ್ರ ಜೇನು ಗೂಡು ಕಟ್ಟುವುದು ಪ್ರಕೃತಿಯ ವಿಸ್ಮಯವಾಗಿದ್ದು,ಈ ಕುರಿತು ಅಧ್ಯಯನ ನಡೆಯಬೇಕು.ಜೇನು ಬರುವ ಸಮಯದಲ್ಲಿ ಮರಕ್ಕೆ ತೆಂಗಿನಕಾಯಿ ಇಟ್ಟು ವಿಶೇಷ ಪೂಜೆ ನೆರವೇರಿಸಿ ಈ ಮರಕ್ಕೆ ಇನ್ನಷ್ಟು ಜೇನು ಬರಲಿ ಎಂದು ಆಶಿಸುವದು ಸ್ಥಳೀಯ ಜನರ ಸಂಪ್ರದಾಯವಾಗಿದೆ.ಆದರೆ ಈ ವರ್ಷ ಗುರಿಗೆ ಹೂವು ಬಂದರೂ ಕಡಿಮೆ ಪ್ರಮಾಣದಲ್ಲಿ ಜೇನು ಗೂಡು ಕಟ್ಟಿರುವದು ಜೇನು ಸಂತತಿ ಕ್ಷೀಣಿಸಿರುವ ಸಂಕೇತವಾಗಿದೆ. ಈ ನಡುವೆಯೇ ಕಟ್ಟಿರುವ ಜೇನುಗೂಡುಗಳನ್ನು ನಾಶ ಮಾಡಲಾಗಿದೆ ಎಂದು ಅವರು ಹೇಳಿದರು.

ಜೇನು ಮರ ಜೀವ ವೈವಿಧ್ಯತೆಗೆ ಅಪಾರ ಕೊಡುಗೆ ನೀಡಿರುವದರಿಂದ ಇವುಗಳ ರಕ್ಷಣೆ ಆಗಬೇಕು. ಇದನ್ನು ರಕ್ಷಣೆ ಮಾಡುತ್ತಿರುವ ಮುಷ್ಕಿ ಗ್ರಾಮ ಅರಣ್ಯ ಸಮಿತಿಗೆ ಅರಣ್ಯ ಇಲಾಖೆ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಧರ್ಮೇಂದ್ರ ಹೆಗಡೆ, ಆರ್.ಪಿ.ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.